ಶನಿವಾರ, ಜನವರಿ 22, 2022
16 °C

ಐಸಿಸ್‌ ಬೆದರಿಕೆ: ತಾಲಿಬಾನಿಗಳಿಂದ ಶಿಯಾ ಹಜಾರಾಗಳಿಗೆ ರಕ್ಷಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಕಾಬೂಲ್‌ನ ಶಿಯಾ ಮಸೀದಿಯ ಹೊರಗಡೆ ನಾಲ್ವರು ಶಸ್ತ್ರಸಜ್ಜಿತ ತಾಲಿಬಾನ್‌ ಹೋರಾಟಗಾರರು ಮತ್ತು ಅಲ್ಪಸಂಖ್ಯಾತ ಶಿಯಾ ಹಜಾರತ್‌ ಸಮುದಾಯಕ ವ್ಯಕ್ತಿಯೊಬ್ಬ ಕಾವಲು ಕಾಯುತ್ತಿದ್ದರೆ, ಮಸೀದಿಯೊಳಗೆ ಶಿಯಾ ಸಮುದಾಯದ ಹತ್ತಾರು ಮಂದಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದರು. ತೀರಾ ಅಪರೂಪವೆನ್ನಬಹುದಾದ ಇಂತಹ ಸನ್ನಿವೇಶಕ್ಕೆ ಅಫ್ಗಾನಿಸ್ತಾನ ಇದೀಗ ಸಾಕ್ಷಿಯಾಗುತ್ತಿದೆ.

ದಶಕಗಳ ಕಾಲ ಶಿಯಾ ಹಜಾರಾಗಳನ್ನು ಧರ್ಮದ್ರೋಹಿಗಳೆಂದು ಗುರಿಪಡಿಸಿ ತಾಲಿಬಾನಿ ಸುನ್ನಿಗಳು ಹಿಂಸಿಸಿದ್ದರು. ಈಗ ತಾಲಿಬಾನಿಗಳಿಗಿಂತಲೂ ಹೆಚ್ಚು ಕ್ರೂರಿಗಳಾದ ಇಸ್ಲಾಮಿಕ್‌ ಸ್ಟೇಟ್‌ ಗುಂಪಿನ ಬೆದರಿಕೆ ತಾಲಿಬಾನ್‌ಗಳಿಗೂ ಇದೆ. ಹೀಗಾಗಿ ತಮ್ಮ ಸುನ್ನಿ ಸಮುದಾಯದವರ ಜತೆಗೆ ಶಿಯಾ ಸಮುದಾಯದವರನ್ನೂ ರಕ್ಷಿಸುವ ಹೊಣೆ ತಾಲಿಬಾನಿಗಳ ಮೇಲೆ ಬಿದ್ದಿದೆ.

‘ತಾಲಿಬಾನಿಗಳು ನಮ್ಮೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅವರು ಕೆಲವೊಮ್ಮೆ ಮಸೀದಿಗೆ ಪ್ರಾರ್ಥಿಸಲು ಬರುತ್ತಾರೆ’ ಎಂದು ಇಲ್ಲಿನ ಅಬುಲ್ ಫಝಲ್ ಅಲ್-ಅಬ್ಬಾಸ್ ಮಸೀದಿಯ ಭದ್ರತಾ ಸಿಬ್ಬಂದಿ ಅಬುಲ್‌ ಫಝಲ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆದರೆ ಪ್ರತಿಯೊಬ್ಬರಲ್ಲೂ ಇಂಥದ್ದೇ ಭಾವನೆ ಇದೆ ಎನ್ನಲಾಗದು ಎಂದೂ ಹೇಳಿದ್ದಾರೆ.

ಪತ್ನಿ ಮತ್ತು ಎಂಟು ತಿಂಗಳ ಮಗಳೊಂದಿಗೆ ಮಸೀದಿಗೆ ಭೇಟಿ ನೀಡಿದ್ದ ಹಜಾರಾ ಸಮುದಾಯದ ಸೈಯದ್‌ ಅಖಿಲ್‌ ಎಂಬುವವರು, ತಾಲಿಬಾನಿಗಳು ಪೊಲೀಸ್‌ ಉಡುಗೆ ತೊಡದೆ, ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಇದ್ದು, ಜಿಹಾದಿ ದಂಗೆಕೋರರಂತೆಯೇ ಕಾಣುತ್ತಿದ್ದಾರೆ ಎನ್ನುತ್ತಾರೆ.

ತಾಲಿಬಾನ್‌ 1990ರ ದಶಕದಲ್ಲಿ ಹಜಾರಗಳು ಮತ್ತು ಇತರ ಜನಾಂಗೀಯ ಗುಂಪುಗಳನ್ನು ಹಿಂಸಿಸಿದಂತೆ ಈ ಬಾರಿ ಹಿಂಸಿಸುತ್ತಿಲ್ಲ. ಬದಲಿಗೆ ಅವರ ವಿರುದ್ಧ ಮೃದು  ಧೋರಣೆ ತಾಳಿದ್ದಾರೆ. ಅಂತರರಾಷ್ಟ್ರೀಯ ಮನ್ನಣೆ ಪಡೆಯುವ ಸಲುವಾಗಿ ಅವರು ದೇಶದ ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ ಕೆಲ ಮೃದು ಧೋರಣೆ ಅನುಸರಿಸುತ್ತಿರಬಹುದು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು