ಸೋಮವಾರ, ಆಗಸ್ಟ್ 8, 2022
22 °C

ಅಧ್ಯಕ್ಷ ಗಾದಿಗೆ ಏರಲು ಹೊಸ ಹಾದಿ‌: ಪಶ್ಚಿಮದತ್ತ ಮುಖ ಮಾಡಿದ ಟ್ರಂಪ್‌

ಎಪಿ Updated:

ಅಕ್ಷರ ಗಾತ್ರ : | |

ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಬಯಸಿರುವ ರಿಪಬ್ಲಿಕನ್‌‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರು ಈಗ ನೆವಾಡ ಪ್ರಾಂತ್ಯದ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

ನೆವಾಡದ ಮತದಾರರು 2004ರಿಂದಲೂ ಡೆಮಾಕ್ರಟಿಕ್‌ ಪಕ್ಷದ ಬೆನ್ನಿಗೆ ನಿಂತಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಅವರು ಹಿಲರಿ ಕ್ಲಿಂಟನ್‌ ಎದುರು ಈ ಪ್ರಾಂತ್ಯದಲ್ಲಿ ಸೋತಿದ್ದರು. ನೆವಾಡ, ಡೆಮಾಕ್ರಟಿಕ್‌ ಪಕ್ಷದ ಭದ್ರ ಕೋಟೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿತ್ತು.

ಈ ಬಾರಿ ಹೇಗಾದರೂ ಮಾಡಿ ಇಲ್ಲಿನ ಮತದಾರರ ಮನ ಗೆಲ್ಲಲೇಬೇಕು ಎಂದು ದೃಢವಾಗಿ ನಿಶ್ಚಯಿಸಿರುವ ಟ್ರಂಪ್‌ ಅದಕ್ಕಾಗಿ ವಿಶೇಷ ಕಾರ್ಯತಂತ್ರ ರೂಪಿಸಿದ್ದು, ಈ ಭಾಗದಲ್ಲಿ ಭರ್ಜರಿ ಪ್ರಚಾರ ಮಾಡಲು ತೀರ್ಮಾನಿಸಿದ್ದಾರೆ.

‘ಈ ಬಾರಿ ಜನ ಟ್ರಂಪ್‌ ಪರ ವಾಲುವ ನಿರೀಕ್ಷೆ ಇದೆ. ಹೀಗಾಗಿ ಡೆಮಾಕ್ರಟಿಕ್‌ ಪಕ್ಷದಲ್ಲಿ ಈಗಾಗಲೇ ಭಯ ಶುರುವಾಗಿದೆ’ ಎಂದು ಆ ರಾಜ್ಯದ ಜಿಒಪಿ ಮುಖ್ಯಸ್ಥ ಮೈಕಲ್‌ ಮೆಕ್‌ಡೊನಾಲ್ಡ್‌ ತಿಳಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಹಾಗೂ ಟ್ರಂಪ್‌ ಅವರು ಈ ಭಾಗದ ಮತದಾರರ ಮನಸೆಳೆಯಲು ತಲಾ 45 ಲಕ್ಷ ಡಾಲರ್‌ (₹33 ಕೋಟಿ) ವೆಚ್ಚಮಾಡಿದ್ದಾರೆ.

ಟ್ರಂಪ್‌ ಅವರ ತಂಡವು ರೆನೊ ಮತ್ತು ಲಾಸ್‌ ವೆಗಾಸ್‌ನ ವಿಮಾನ ನಿಲ್ದಾಣಗಳ ಸಮೀಪ ರ‍್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಾಗಬಹುದು ಎಂಬ ಕಾರಣದಿಂದ ಈ ರ‍್ಯಾಲಿಗಳನ್ನು ರದ್ದು ಮಾಡಲಾಗಿದೆ.

ಈ ರ‍್ಯಾಲಿಗಳು ರದ್ದಾಗಲು ಡೆಮಾಕ್ರಟಿಕ್‌ ಪಕ್ಷದ ಗವರ್ನರ್‌ ಸ್ಟೀವ್‌ ಸಿಸೋಲಕ್‌ ಅವರೇ ಕಾರಣ ಎಂದು ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರು ದೂರಿದ್ದರು. ರೆನೊ ರ‍್ಯಾಲಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರೆ, ಲಾಸ್‌ ವೆಗಾಸ್‌ನಲ್ಲಿ ರ‍್ಯಾಲಿ ಆಯೋಜಿಸುವ ಸಂಬಂಧ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ ಎಂದು ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಶ್ವೇತ ಭವನ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ನಡೆಯುವ ಯಾವುದೇ ಸಭೆ ಅಥವಾ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಈ ನಿಯಮವನ್ನು ಸಿಸೋಲಕ್‌ ಅವರು ಮೇ ತಿಂಗಳಿನಿಂದಲೇ ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ.

‘ಟ್ರಂಪ್‌ ಅವರು ಕೊರೊನಾ ಬಿಕ್ಕಟ್ಟಿನ ನಡುವೆಯೂ ರ‍್ಯಾಲಿಗಳನ್ನು ಆಯೋಜಿಸುವ ಮೂಲಕ ನೆವಾಡದ ಜನರನ್ನು ಅಪಾಯಕ್ಕೆ ತಳ್ಳಲು ಮುಂದಾಗಿದ್ದಾರೆ. ಅವರು ಕೈಗೊಳ್ಳುವ ತಪ್ಪು ನಿರ್ಧಾರಗಳಿಗೆ ಇದೊಂದು ತಾಜಾ ಉದಾಹರಣೆ’ ಎಂದು ಡೆಮಾಕ್ರಟಿಕ್‌ ಪಕ್ಷದ ಮ್ಯಾಡಿಸನ್‌ ಮುಂಡಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು