ವಾಷಿಂಗ್ಟನ್: 2024ರ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಪೈಕಿ ಮೂರನೇ ಮಹಾಯುದ್ಧವನ್ನು ತಡೆಯಬಲ್ಲವನು ನಾನೊಬ್ಬನೇ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೋಮವಾರ ಲೋವಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಮೂರನೇ ಮಹಾಯುದ್ಧ ನಡೆಯಲಿದೆ ಎಂದು ನಾನು ನಂಬುವುದಾಗಿ ಹೇಳಿದರು. ಈ ರೀತಿ ಹಿಂದೆಂದೂ ಜಗತ್ತಿಗೆ ಇಷ್ಟು ಅಪಾಯಕಾರಿ ಸಮಯ ಬಂದಿರಲಿಲ್ಲ ಎಂದು ಟ್ರಂಪ್ ಹೇಳಿರುವುದಾಗಿ ನ್ಯೂಸ್‌ವೀಕ್ ವರದಿ ಮಾಡಿದೆ.
ಜೋ ಬೈಡನ್ ರಷ್ಯಾವನ್ನು ಚೀನಾದ ತೆಕ್ಕೆಗೆ ಸೇರಿಸಿದರು ಮತ್ತು ಈ ಸರ್ಕಾರವು ದೇಶವನ್ನು ಪರಮಾಣು ಯುದ್ಧಕ್ಕೆ ಕೊಂಡೊಯ್ಯುತ್ತದೆ. ಅದು ಬಹುಶಃ ಜಗತ್ತನ್ನು ಕೊನೆಗೊಳಿಸಬಹುದು ಎಂದು ಟ್ರಂಪ್ ಹೇಳಿದರು.
ಈ ಸರ್ಕಾರದ ಆಡಳಿತಾವಧಿಯಲ್ಲಿ ಮೂರನೇ ಮಹಾಯುದ್ಧವನ್ನು ನೋಡಬೇಕಾಗಿದೆ. ಏಕೆಂದರೆ, ಅವರು ಯಾರೊಂದಿಗೂ ಸರಿಯಾಗಿ ವ್ಯವಹರಿಸುತ್ತಿಲ್ಲ. ಮೃದುವಾಗಿ ಇರಬೇಕಾದ ಕಠಿಣವಾಗಿ ವರ್ತಿಸುತ್ತಾರೆ. ಕಠಿಣವಾಗಿ ಇರಬೇಕಾದ ಸಂದರ್ಭದಲ್ಲಿ ಮೃದುವಾಗಿ ವರ್ತಿಸುತ್ತಾರೆ ಎಂದು ಟ್ರಂಪ್ ದೂರಿದ್ದಾರೆ. ಅವರು ಮಾಡುತ್ತಿರುವ ತಪ್ಪಿನ ಬಗ್ಗೆ ಅವರಿಗೆ ಅರಿವೇ ಆಗುತ್ತಿಲ್ಲ ಎಂದು ಬೈಡನ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶವು ವಿಶ್ವಯುದ್ಧದಲ್ಲಿ ಅಂತ್ಯವಾಗಲಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.
2024ರಲ್ಲಿ ನಾನು ವಿಜಯಶಾಲಿಯಾದರೆ, ರಷ್ಯಾ– ಉಕ್ರೇನ್ ನಡುವಿನ ಸಂಘರ್ಷ 24 ಗಂಟೆಗಳಲ್ಲಿ ಇತ್ಯರ್ಥವಾಗಲಿದೆ ಎಂದು ಭರವಸೆ ನೀಡಿದ್ದಾ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನನಗೆ ಉತ್ತಮ ಸಂಬಂಧವಿದೆ. ಅವರು ನನ್ನ ಮಾತು ಕೇಳುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.