ಶನಿವಾರ, ಮಾರ್ಚ್ 25, 2023
23 °C

ಅಮೆರಿಕದ ಮೇಲೆ ವಿನಾಶಕಾರಿ ‘ಬಾಂಬ್‌ ಸೈಕ್ಲೋನ್‌’ ದಾಳಿ: ಜನರ ಪರದಾಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಚಿಕಾಗೊ: ‘ಬಾಂಬ್ ಸೈಕ್ಲೋನ್’ ಎಂದು ಕರೆಸಿಕೊಳ್ಳುವ ಚಳಿಗಾಲದ ಚಂಡಮಾರತವು ಅಮೆರಿಕವನ್ನು ಸುತ್ತುವರಿದಿದೆ. ಇದರ ಪರಿಣಾಮವಾಗಿ ತೀವ್ರ ಅನಾಹುತಗಳು ವರದಿಯಾಗಿದೆ. ಹಲವು ಕಡೆಗಳಲ್ಲಿ ಹೆದ್ದಾರಿಗಳು ನಾಶಗೊಂಡಿದ್ದು, ಸಂಪರ್ಕ ಸ್ಥಗಿತಗೊಂಡಿದೆ, ವಿಮಾನಗಳ ಹಾರಾಟವಿಲ್ಲದೇ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ 10 ಲಕ್ಷಕ್ಕಿಂತಲೂ ಅಧಿಕ ಮಂದಿ ವಿದ್ಯುತ್‌ ಇಲ್ಲದೇ ಕಗ್ಗತ್ತಲಿನಲ್ಲಿರುವಂತಾಗಿದೆ.

ಇದನ್ನೂ ಓದಿ: ಚಂಡಮಾರುತ ಸೃಷ್ಟಿಯಾಗುವುದು ಹೇಗೆ?

ವಾಷಿಂಗ್ಟನ್‌ನಿಂದ ಹಿಡಿದು ಪ್ಲಾರಿಡಾದ ವರೆಗೆ ಒಟ್ಟು 48 ರಾಜ್ಯಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. 20 ಕೋಟಿ ಅಂದರೆ, ಅಮೆರಿಕದ ಅರ್ಧದಷ್ಟು ಜನ ಇದರಿಂದ ತೊಂದರೆ ಅನಭವಿಸುತ್ತಿದ್ದಾರೆ. 

ದೇಶದ ಬಹುತೇಕ ಕಡೆ ಭಾರಿ ಹಿಮ ಮಳೆ ಸುರಿಯುತ್ತಿದೆ. ಗಾಳಿಯ ಸದ್ದು ಆನೆ ಘೀಳಿಡುವಂತೆ ಕೇಳುತ್ತದೆ. ಕೊರೆಯುವ ಚಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಸಮಶೀತೋಷ್ಣ ವಲಯದ ದಕ್ಷಿಣ ರಾಜ್ಯಗಳಲ್ಲೂ ವಿಪರೀತ ಚಳಿ ಆವರಿಸಿದೆ. ಯಾವ ಮಟ್ಟಕ್ಕೆ ಎಂದರೆ, ಕುದಿಯುವ ನೀರೂ ಕೂಡ ಕೆಲವೇ ಕ್ಷಣಗಳಲ್ಲಿ ಮಂಜಿನ ಗಡ್ಡೆಯಾಗುವ ಹಂತಕ್ಕೆ...

ತಾಪಮಾನವು –48 ಸೆಲ್ಸಿಯಸ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿಯುತ್ತಿರುವುದಾಗಿ ರಾಷ್ಟ್ರೀಯ ಹವಾಮಾನ ಸೇವೆ (ಎನ್‌ಡಬ್ಲ್ಯುಎಸ್‌) ತೀವ್ರ ಆಘಾತ ವ್ಯಕ್ತಪಡಿಸಿದೆ. ಹೀಗಾಗಿ ಸುಮಾರು 2 ಕೋಟಿ ಜನ ರೆಡ್‌ ಅಲರ್ಟ್‌ನಡಿ ದಿಗಿಲಿನಿಂದ ದಿನ ದೂಡುತ್ತಿದ್ದಾರೆ.

ಗಾಳಿ, ಹಿಮ ಮಳೆಯ ಪರಿಣಾಮವಾಗಿ ಹಲವಾರು ಕಡೆಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಅಡ್ಡಿಯುಂಟಾಗಿದೆ. ವಿದ್ಯುತ್‌ ವ್ಯತ್ಯಯದ ಬಗ್ಗೆ ಮಾಹಿತಿ ಒದಗಿಸುವ poweroutage.us ಪ್ರಕಾರ, ವಿದ್ಯುತ್‌ ಇಲ್ಲದೇ ಪರಿತಪಿಸುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಕೊರೆಯುವ ಚಳಿಯು ತಕ್ಷಣದ ಬೆದರಿಕೆಯಾಗಿ ಪರಿಣಮಿಸಿದೆ.

‘ಇದೊಂದು ಮಹಾ ದುರಂತ. ರಾಷ್ಟ್ರವ್ಯಾಪಿ ಅಪಾಯ’ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನ್ಯೂಯಾರ್ಕ್, ಸಿಯಾಟಲ್ ಮತ್ತು ಚಿಕಾಗೋದ ಓ'ಹೇರ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸುಮಾರು 5,000 ವಿಮಾನಗಳು ಶುಕ್ರವಾರ ರದ್ದುಗೊಂಡಿವೆ ಮತ್ತು 7,600 ವಿಮಾನಗಳು ವಿಳಂಬವಾಗಿವೆ’ ಎಂದು ವಿಮಾನಯಾನ ಸೇವೆಯ ಮೇಲೆ ನಿಗಾ ವಹಿಸುವ ವೆಬ್‌ಸೈಟ್ FlightAware ಹೇಳಿದೆ.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಚಂಡಮಾರುತವು ‘ಬಾಂಬ್ ಸೈಕ್ಲೋನ್’ ಆಗಿ ರೂಪಾಂತರಗೊಂಡಿದೆ. ಇದರ ಪರಿಣಾಮವಾಗಿ ತೀವ್ರ ಮಳೆ, ಹಿಮ ಮಳೆಯಾಗುತ್ತಿದೆ. ತೀರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲಿದೆ. ಬಲವಾದ ಗಾಳಿ ಬೀಸಲಿದೆ.

ಬಾಂಬ್ ಚಂಡಮಾರುತ ಮಧ್ಯ-ಅಕ್ಷಾಂಶದ ಚಂಡಮಾರುತ. ಅದರ ವಾಯುಭಾರವು 24 ಗಂಟೆಗಳಲ್ಲಿ ತೀವ್ರವಾಗಿ ಕುಸಿತವುಂಟಾಗಿದೆ. ಹೀಗಾಗಿ ಅದರು ವಿನಾಶಕಾರಿ ರೂಪ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು