'ಇಸ್ಲಾಮಿಸ್ಟ್ ಪ್ರತ್ಯೇಕತಾವಾದ'ದ ವಿರುದ್ಧ ಫ್ರಾನ್ಸ್ ಕಾಯ್ದೆ: ಏನಿದು?

ಪ್ಯಾರಿಸ್: ಇಸ್ಲಾಮಿಸ್ಟ್ ಪ್ರತ್ಯೇಕತಾವಾದವನ್ನು ಎದುರಿಸುವ ನಿಟ್ಟಿನಲ್ಲಿ ರೂಪಿಸಲಾದ ಮಸೂದೆಗೆ ಫ್ರಾನ್ಸ್‌ನ ರಾಷ್ಟ್ರೀಯ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.
ಫ್ರಾನ್ಸ್ ದೇಶದ ನಗರ ಹಾಗೂ ಪಟ್ಟಣಗಳಲ್ಲಿ ಇಸ್ಲಾಮಿಸ್ಟ್ ಪ್ರತ್ಯೇಕತಾವಾದವು ಹೆಚ್ಚುತ್ತಿದೆ. ಇದರಿಂದ ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗಲಿದೆ. ಆ ಹಿನ್ನೆಲೆಯಲ್ಲಿ ಮಸೂದೆಯ ಪರವಾಗಿ ಮತ ಚಲಾಯಿಸಿದ್ದೇವೆ ಎಂದು ಅಲ್ಲಿನ ಸಂಸತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರ ನಡೆದ ನಂತರ ಆನ್‌ಲೈನ್‌ನಲ್ಲಿ ಕ್ಷಮೆಯಾಚಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಧಾರ್ಮಿಕ ಸಂಘಟನೆಗಳ ಮೇಲೆ ಕಣ್ಗಾವಲನ್ನು ಇಡುವ ಪ್ರಕ್ರಿಯೆಗಳನ್ನು ಕಾಯ್ದೆ ಒಳಗೊಂಡಿದೆ.
ಇದಲ್ಲದೇ, ಮುಖ್ಯವಾಹಿನಿ ಶಾಲೆಗಳ ಹೊರತಾಗಿ ಮಕ್ಕಳಿಗೆ ಅನ್ಯ ಶಿಕ್ಷಣ ನೀಡುವುದರ ವಿರುದ್ಧ ನಿರ್ಬಂಧಗಳನ್ನು ಹೇರುವುದರ ಬಗ್ಗೆಯೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಫ್ರಾನ್ಸ್‌ನಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಮುಸ್ಲಿಂ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಅವರ ಕುಟುಂಬದ ಮೂಲಗಳು ಅಲ್ಜೀರಿಯಾ ಅಥವಾ ಹಿಂದಿನ ಫ್ರಾನ್ಸ್ ಸಾಮ್ರಾಜ್ಯದ ಇತರ ಭಾಗಗಳಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ದೇಶವು ಹಲವು ಉಗ್ರಗಾಮಿ ದಾಳಿಗಳಿಗೆ ಸಾಕ್ಷಿಯಾಗಿದೆ.
ಧಾರ್ಮಿಕ ಉಗ್ರವಾದ, ಫ್ರೆಂಚ್ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರಗಳು ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಚರ್ಚಾತ್ಮಕ ವಿಷಯಗಳಾಗಲಿವೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.