ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಜೆಂಟ್‌ ಆರೆಂಜ್‌’ ಬಳಕೆ ವಿರುದ್ಧ ದೂರು ತಿರಸ್ಕರಿಸಿದ ಫ್ರಾನ್ಸ್‌ ನ್ಯಾಯಾಲಯ

Last Updated 17 ಮೇ 2021, 14:06 IST
ಅಕ್ಷರ ಗಾತ್ರ

ಎವ್ರಿ, ಫ್ರಾನ್ಸ್‌: ವಿಷಕಾರಿ ರಾಸಾಯನಿಕ ದ್ರಾವಣ ‘ಏಜೆಂಟ್‌ ಆರೇಂಜ್‌’ ಉತ್ಪಾದನೆಗೆ ಕಾರಣವಾದ ಮಾನಸಂಟೊ ಮತ್ತು ಇತರ ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡುವ ಫ್ರೆಂಚ್‌– ವಿಯೆಟ್ನಾಮಿ ವೃದ್ಧೆಯೊಬ್ಬರ ಯತ್ನ ವಿಫಲಗೊಂಡಿದೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕ ಸೇನೆಯು ಎದುರಾಳಿಗಳನ್ನು ಮಣಿಸಲು ಈ ವಿಷಕಾರಿ ದ್ರಾವಣವನ್ನು ಪ್ರಯೋಗಿಸಿತ್ತು.

ಸಾರ್ವಭೌಮ ರಾಷ್ಟ್ರವೊಂದಕ್ಕೆ ಕೆಲಸ ಮಾಡುತ್ತಿದ್ದ ಕಾರಣ ಈ ಕಂಪನಿಗಳಿಗೆ ಕಾನೂನಿನ ರಕ್ಷೆಯಿದೆ ಎಂದು ಫ್ರಾನ್ಸ್‌ನ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ರಸಗೊಬ್ಬರ ತಯಾರಿಸುವ 14 ರಾಸಾಯನಿಕ ಕಂಪನಿಗಳ ವಿರುದ್ಧ, 79 ವರ್ಷದ ಟ್ರಾನ್ ಟೊನ್‌ಗಾ ಎಂಬ ವೃದ್ಧೆ ದೂರು ಸಲ್ಲಿಸಿದ್ದರು. ಈ ವಿಷಕಾರಿ ರಾಸಾಯನಿಕವನ್ನು ಅಮೆರಿಕ ಸೇನೆಗೆ ಮಾರುವ ಮೂಲಕ ಈ ಕಂಪನಿಗಳು ತಮಗೆ ಮತ್ತು ಇತರರಿಗೆ ತುಂಬಾ ಆರೋಗ್ಯ ಸಮಸ್ಯೆ ಉಂಟುಮಾಡಿದ್ದವು ಎಂದು ತಿಳಿಸಿದ್ದರು.

ಆಗ ಇಂಡೊ ಚೀನಾ ಎಂದು ಕರೆಸಿಕೊಳ್ಳುತ್ತಿದ್ದ ವಿಯಟ್ನಾಮ್‌ನ ಮೇಲೆ ಅಮೆರಿಕ ಸೇನೆಯು ಈ ವಿಷಕಾರಿ ಸಸ್ಯನಾಶಕ ದ್ರಾವಣವನ್ನು ಸಿಂಪಡಿಸಿತ್ತು. 1942ರಲ್ಲಿ ಜನಿಸಿದ ಟ್ರಾನ್‌ ಅವರು ವಿಯೆಟ್ನಾಂ ಯುದ್ಧದ (1955–1975) ವರದಿ ಮಾಡಿದ್ದರು. ಮೂರು ದಶಕಗಳಿಂದ ಫ್ರಾನ್ಸ್‌ನಲ್ಲಿ ನೆಲೆಸಿದ್ದಾರೆ. ಈ ದ್ರಾವಣ ಪರಿಸರಕ್ಕೂ ಹಾನಿ ಉಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಅಮೆರಿಕ ಸರ್ಕಾರಕ್ಕೆ ಈ ಕಂಪನಿಗಳು ಕೆಲಸ ಮಾಡುತ್ತಿದ್ದ ಕಾರಣ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅವುಗಳಿಗೆ ಕಾನೂನಿನ ರಕ್ಷೆ ಸಿಗುತ್ತದೆ ಎಂದು ಪ್ಯಾರಿಸ್‌ ಉಪನಗರದ ಎವ್ರಿಯ ನ್ಯಾಯಾಲಯ ತಿಳಿಸಿದೆ.

ವಿಯೆಟ್ನಾಮ್‌, ಲಾವೋಸ್‌ ಮತ್ತು ಕಾಂಬೋಡಿಯಾದ 40 ಲಕ್ಷ ಜನರು ವಿಮಾನ ಮೂಲಕ ಸಿಂಪಡಿಸಲಾದ 7.6 ಕೋಟಿ ಲೀಟರ್‌ ದ್ರಾವಣದ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಯುದ್ಧವಿರೋಧಿ ಗುಂಪುಗಳು ಅಂದಾಜು ಮಾಡಿವೆ. ವಿಯೆಟ್ನಾಮಿ ಸೇನೆ ಮತ್ತು ಅವರ ಆಹಾರ ಮೂಲಗಳನ್ನು ನಾಶ ಮಾಡಲು ಇದನ್ನು 1962 ರಿಂದ 1971ರ ಅವಧಿಯಲ್ಲಿ ಬಳಸಲಾಗಿತ್ತು.

ರಾಸಾಯನಿಕದ ಪ್ರಭಾವದಿಂದ ಒಂದೂವರೆ ಲಕ್ಷ ಮಕ್ಕಳು ಹುಟ್ಟುತ್ತಲೇ ನಾನಾ ವಿಧದ ಅಂಗ ಊನಗಳನ್ನು ಅನುಭವಿಸಿದ್ದರು ಎಂದು ವಿಯೆಟ್ನಾಮ್‌ ದೂರಿತ್ತು. ಟ್ರಾನ್‌ ಟೊನ್‌ಗಾ ಅವರು ಮಧುಮೇಹ ಮತ್ತು ಇನ್ಸುಲಿನ್‌ ಅಲರ್ಜಿಯ ವಿರಳಾತಿವಿರಳ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT