ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ತಾಲಿಬಾನ್‌ ನಾಯಕತ್ವ–ಬಣಗಳ ನಡುವೆ ಘರ್ಷಣೆ ತೀವ್ರ

Last Updated 16 ಸೆಪ್ಟೆಂಬರ್ 2021, 9:02 IST
ಅಕ್ಷರ ಗಾತ್ರ

ಕಾಬೂಲ್ (ಎಪಿ): ಕಳೆದ ವಾರ ಸಂಪುಟ ರಚನೆ ಆದಾಗಿನಿಂದ ತಾಲಿಬಾನ್ ನಾಯಕತ್ವಕ್ಕೆ ಸಂಬಂಧಿಸಿದಂತೆ ವಾಸ್ತವವಾದಿಗಳು ಮತ್ತು ಮೂಲಭೂತವಾದಿಗಳ ನಡುವಿನ ಘರ್ಷಣೆ ತೀವ್ರಗೊಂಡಿದೆ ಎಂದು ಅಫ್ಗನ್ನರ ಅಧಿಕಾರದ ಹೋರಾಟ ಬಗ್ಗೆ ತಿಳಿದಿರುವ ಇಬ್ಬರು ನಾಯಕರು ಹೇಳಿದ್ದಾರೆ.

ಎರಡೂ ಬಣಗಳ ನಡುವೆ ತೆರೆಮರೆಯಲ್ಲಿ ಜಗಳಗಳು ನಡೆಯುತ್ತಿವೆ. ಅಧ್ಯಕ್ಷರ ಅರಮನೆಯಲ್ಲಿ ಈ ಎರಡು ಬಣಗಳ ನಡುವೆ ಇತ್ತೀಚೆಗೆ ಹಿಂಸಾತ್ಮಕ ಘರ್ಷಣೆಗಳು ನಡೆದಿರುವ ವದಂತಿಗಳೂ ಹಬ್ಬಿವೆ. ಇದರಲ್ಲಿ ವಾಸ್ತವವಾದಿಗಳ ಬಣದ ನಾಯಕ ಅಬ್ದುಲ್ ಘನಿ ಬರದರ್ ಹತರಾಗಿದ್ದಾರೆ ಎಂದು ಹೇಳಲಾಗಿತ್ತು.

ಈ ವದಂತಿಗಳು ತೀವ್ರವಾಗಿ ಹರಡುತ್ತಿದ್ದಂತೆಯೇ, ಬರದರ್‌ ಅವರು ತಾನು ಕೊಲೆಯಾಗಿಲ್ಲ ಎಂದು ಆಡಿಯೊ ರೆಕಾರ್ಡಿಂಗ್‌ ಮತ್ತು ಕೈಬರಹದ ಹೇಳಿಕೆಯನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಬುಧವಾರ ಅವರು ರಾಷ್ಟ್ರೀಯ ವಾಹಿನಿಯ ಸಂದರ್ಶನದಲ್ಲೂ ಕಾಣಿಸಿಕೊಂಡಿದ್ದಾರೆ.

‘ನಾನು ಕಾಬೂಲ್‌ನಿಂದ ಪ್ರಯಾಣಿಸುತ್ತಿದ್ದೆ. ಹಾಗಾಗಿ ಆಗ ಈ ಸುದ್ದಿಯನ್ನು ನಿರಾಕರಿಸಲು ಮಾಧ್ಯಮದೊಂದಿಗೆ ಸಂಪರ್ಕ ಸಾಧಿಸಲು ಆಗಲಿಲ್ಲ’ ಎಂದು ಬರದರ್‌ ವಂದಿತಿಗಳ ಕುರಿತು ಹೇಳಿದ್ದಾರೆ.

ತಾಲಿಬಾನ್ ಮತ್ತು ಅಮೆರಿಕದ ನಡುವಿನ ಮಾತುಕತೆಯ ಸಂದರ್ಭದಲ್ಲಿ ಬರದರ್ ಮುಖ್ಯ ಸಮಾಲೋಚಕರ ಪಾತ್ರ ನಿರ್ವಹಿಸಿದ್ದರು. ಇದು ಅಮೆರಿಕ ಸೇನೆಯನ್ನು ಅಫ್ಗನ್ನ್‌ನಿಂದ ಹಿಂತೆಗೆದುಕೊಳ್ಳಲು ದಾರಿ ಮಾಡಿಕೊಟ್ಟಿತು.

ಕಾಬೂಲ್ ಅನ್ನು ತಾಲಿಬಾನಿಗಳು ಸ್ವಾಧೀನಪಡಿಸಿಕೊಂಡ ಸ್ವಲ್ಪ ಸಮಯದ ಬಳಿಕ, ಎಲ್ಲರನ್ನು ಒಳಗೊಂಡ ಸರ್ಕಾರ ರಚಿಸುವ ಸಾಧ್ಯತೆ ಕುರಿತು ಬರದಾರ್‌ ಹೇಳಿಕೆ ನೀಡಿದ್ದರು. ಆದರೆ ಕಳೆದ ವಾರ ತಾಲಿಬಾನಿ ಪುರುಷರನ್ನಷ್ಟೇ ಒಳಗೊಂಡ ಸಂಪುಟ ರಚನೆಯೊಂದಿಗೆ ಎಲ್ಲರ ಒಳಗೊಳ್ಳುವಿಕೆಯ ಭರವಸೆ ಮಣ್ಣುಪಾಲಾಗಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಅಧ್ಯಕ್ಷರ ಅರಮನೆಯ ಮೇಲೆ ಬಿಳಿ ಬಣ್ಣದ ತಾಲಿಬಾನ್‌ ಧ್ವಜ ಹಾರಾಡಿದೆ. ಆದರೆ ತಾಲಿಬಾನ್ ಅಧಿಕಾರಿಯೊಬ್ಬರು ಧ್ವಜದ ಬಗ್ಗೆ ನಾಯಕತ್ವವು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ತಾಲಿಬಾನ್‌ನಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿರುಕುಗಳು ಉಂಟಾಗಿವೆ. ಸಂಪುಟ ರಚನೆ ಸಂದರ್ಭದಲ್ಲಿ ಎಲ್ಲರ ಒಳಗೊಳ್ಳುವಿಕೆಯ ಪಾಲನೆ ಆಗದಿದ್ದಕ್ಕೆ ಅಸಮಾಧಾನಗೊಂಡಿದ್ದ ನಾಯಕರೊಬ್ಬರು ಸಚಿವ ಸ್ಥಾನ ನಿರಾಕರಿಸಿದ್ದರು ಎಂದು ಹೆಸರು ಹೇಳಲು ಇಚ್ಚಿಸದ ನಾಯಕರೊಬ್ಬರು ಹೇಳಿದ್ದಾರೆ.

ಆದರೆ, ತಾಲಿಬಾನ್‌ ವಕ್ತಾರ ಜಬೀಹುಲ್ಲಾ ಮುಜಾಹಿದ್ ಇದನ್ನು ಅಲ್ಲಗಳೆದಿದ್ದಾರೆ. ಇಂತಹ ವರದಿಗಳು ‘ಪ್ರಚಾರ’ದ ಉದ್ದೇಶವನ್ನಷ್ಟೇ ಒಳಗೊಂಡಿವೆ ಎಂದು ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತಾಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT