ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಕರಾಚಿಯ ಹಿಂದೂ ದೇವಾಲಯದಲ್ಲಿ ಮೂರ್ತಿಗಳನ್ನು ಭಗ್ನಗೊಳಿಸಿದ ದುಷ್ಕರ್ಮಿ

Last Updated 21 ಡಿಸೆಂಬರ್ 2021, 10:05 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಹಿಂದೂ ದೇವಾಲಯವೊಂದರಲ್ಲಿ ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವ ಘಟನೆ ನಡೆದಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.

ಕರಾಚಿಯ ನಾರಾಯಣಪುರದಲ್ಲಿರುವ 'ನಾರಾಯಣ ಮಂದಿರ'ದಲ್ಲಿನ ಮೂರ್ತಿಗಳನ್ನು ಸೋಮವಾರ ಸಂಜೆ ನಾಶ ಪಡಿಸಲಾಗಿದೆ. ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಂಬಂಧ ಮುಹಮ್ಮದ್‌ ವಾಲೀದ್‌ ಶಬ್ಬೀರ್‌ ಹೆಸರಿನ ವ್ಯಕ್ತಿಯನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹಿಂದೂ ದೇವರುಗಳ ವಿಗ್ರಹಗಳನ್ನು ಸುತ್ತಿಗೆ ಬಳಸಿ ಹಾಳು ಮಾಡುತ್ತಿರುವುದನ್ನು ಮುಕೇಶ್‌ ಕುಮಾರ್‌ ಎಂಬುವವರು ಕಂಡಿದ್ದರು. ಅವರು ಪತ್ನಿ ಜೊತೆಗೆ ನಾರಾಯಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಮೂರ್ತಿಗಳನ್ನು ಭಗ್ನಗೊಳಿಸುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಮಂದಿರದಲ್ಲಿ ಇದ್ದ ಹಿಂದೂಗಳು ಮೂರ್ತಿ ಭಗ್ನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು ಹಾಗೂ ಮುಕೇಶ್‌ ಕುಮಾರ್‌ ದೂರು ದಾಖಲಿಸಿದ್ದರು. ಅನಂತರ, ಅಲ್ಲಿನ ಹಿಂದೂಗಳು ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿ ಸರ್ಕಾರವು ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದರು.

ಹತ್ತಾರು ವರ್ಷಗಳಿಂದ ಬಡ ಮತ್ತು ಕಡಿಮೆ ಆದಾಯದ ಹಿಂದೂ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. ಈ ಹಿಂದೆಯೂ ಪಾಕಿಸ್ತಾನದ ಹಲವು ಭಾಗಗಳಲ್ಲಿ ಹಿಂದೂ ದೇವರ ಮೂರ್ತಿಗಳು, ದೇವಾಲಯಗಳನ್ನು ಭಗ್ನಗೊಳಿಸಿರುವ ಘಟನೆಗಳು ನಡೆದಿರುವುದು ವರದಿಯಾಗಿವೆ.

ಅಧಿಕೃತ ಲೆಕ್ಕಾಚಾರದ ಪ್ರಕಾರ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಒಟ್ಟು ಸಂಖ್ಯೆ 75 ಲಕ್ಷ. ಹಿಂದೂ ಸಮುದಾಯಗಳ ಪ್ರಕಾರ, ಸುಮಾರು 90 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿದ್ದಾರೆ. ಸಿಂಧ್‌ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ವಾಸಿಸುತ್ತಿದ್ದಾರೆ. ಮೂಲಭೂತವಾದಿಗಳಿಂದ ಆಗಾಗ್ಗೆ ತೊಂದರೆ ಅನುಭವಿಸುತ್ತಿರುವುದಾಗಿ ಹಿಂದೂ ಕುಟುಂಬಗಳು ಆಗಾಗ್ಗೆ ದೂರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT