ಗುರುವಾರ , ಡಿಸೆಂಬರ್ 3, 2020
23 °C

ಇಮ್ರಾನ್‌ ಖಾನ್‌ ಅಸಮರ್ಥ ಮತ್ತು ಸುಳಿವಿಲ್ಲದ ನಾಯಕ: ಪಿಡಿಎಂ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ‘ಅಸಮರ್ಥ ಮತ್ತು ಸುಳಿವಿಲ್ಲದ’ ನಾಯಕ. ಅವರ ಸರ್ಕಾರ ಸರ್ವಾಧಿಕಾರಕ್ಕಿಂತಲೂ ಕೆಟ್ಟದಾಗಿದೆ ಎಂದು 11 ವಿಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ ಪ್ರಜಾಸತ್ತಾತ್ಮಕ ಚಳುವಳಿಯ(ಪಿಡಿಎಂ) ನಾಯಕರು ಟೀಕಿಸಿದರು.

ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌(ಪಿಟಿಐ) ಪಕ್ಷದ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ನಿಟ್ಟಿನಲ್ಲಿ ವಿಪಕ್ಷಗಳು ಜೊತೆಗೂಡಿ ಸೆ.20 ರಂದು ಪಿಡಿಎಂ ಅನ್ನು ರಚಿಸಿದವು. ಪಿಡಿಎಂ ಮೂರು ಹಂತಗಳಲ್ಲಿ ಸರ್ಕಾರದ ವಿರುದ್ಧ ಚಳವಳಿಯನ್ನು ನಡೆಸಲಿದೆ.

ಈ ಚಳವಳಿಯಡಿ ದೇಶದೆಲ್ಲೆಡೆ ಹಲವು ಸಾರ್ವಜನಿಕ ಸಭೆ, ಶಕ್ತಿ ಪ್ರದರ್ಶನಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ‘ನಿರ್ಣಾಯಕವಾದ ಬೃಹತ್‌  ರ‍್ಯಾಲಿಯನ್ನು ನಡೆಸಲು ಪಿಡಿಎಂ ಮುಂದಾಗಿದೆ. ಮೊದಲ ರ‍್ಯಾಲಿ ಲಾಹೋರಿನ ಗುಜ್ರಾನ್‌ವಾಲದಲ್ಲಿ ಶುಕ್ರವಾರ ನಡೆಯಿತು.

ಕರಾಚಿಯ ಬಾಗ್-ಎ-ಜಿನ್ನಾದಲ್ಲಿ ಭಾನುವಾರ ನಡೆದ ಎರಡನೇ ರ‍್ಯಾಲಿಯಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಮುಖ್ಯಸ್ಥ ಬಿಲಾವಾಲ್‌ ಭುಟ್ಟೊ ಜರ್ದಾರಿ ಅವರು,‘ಇಮ್ರಾನ್‌ ಖಾನ್‌ ಒಬ್ಬ ಅಸಮರ್ಥ ಮತ್ತು ಸುಳಿವಿಲ್ಲದ ನಾಯಕ. ಸರ್ವಾಧಿಕಾರಿಯು ಅತಿ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ಇದಕ್ಕೆ ಇತಿಹಾಸವೇ ಸಾಕ್ಷಿ’ ಎಂದರು.

ಈ ರ‍್ಯಾಲಿಯಲ್ಲಿ ಕರ್ಸಾಜ್ ಅವಳಿ ಬಾಂಬ್‌ ಸ್ಫೋಟದ 13ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. 2007ರಲ್ಲಿ ಪ್ರಧಾನಿ ಬೆನಜಿರ್‌ ಭುಟ್ಟೊ ಅವರ ರ‍್ಯಾಲಿಯನ್ನು ಗುರಿಯಾಗಿಸಿ ಅವಳಿ ಸ್ಫೋಟ ನಡೆಸಲಾಗಿತ್ತು. ಇದರಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಪಿಎಂಎನ್‌–ಎನ್‌ ಉಪಾಧ್ಯಕ್ಷರಾದ ಮರಿಯಂ ನವಾಜ್‌, ಶಾಹೀದ್‌ ಖಾಗನ್‌ ಅಬ್ಬಾಸಿ, ಪಖ್ತುನ್‌ಕ್ವುವಾ ಮಿಲಿ ಅವಾಮಿ ಪಕ್ಷದ ಅಧ್ಯಕ್ಷ ಮೆಹಮ್ಮೂದ್‌ ಅಚಕ್ಜಿ ಮತ್ತು ಜಿಯುಐ–ಎಫ್‌ ನಾಯಕ ಮೌಲಾನಾ ಫಜುಲುರ್‌ ರೆಹಮಾನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರು.

‘ನೀವು ಸಮಸ್ಯೆಗಳು ಬಂದಾಗ ಸೇನೆಯನ್ನು ಮುಂದೆ ತರುತ್ತೀರಿ. ನಿಮ್ಮ ವಿಫಲತೆಯನ್ನು ಮುಚ್ಚಿಡಲು ಸೇನೆಯನ್ನು ಬಳಸುತ್ತೀರಿ. ಈ ಹಕ್ಕನ್ನು ನಿಮಗೆ ಯಾರು ನೀಡಿದ್ದಾರೆ. ಸರ್ಕಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎಂಬ ಪಟ್ಟು ಕಟ್ಟುತ್ತೀರಿ. ನಿಮ್ಮ ಈ ರೀತಿಯ ಬೆದರಿಕೆಯಿಂದ ನಾವು ಹಿಂಜರಿಯಲ್ಲ. ಎಷ್ಟು ಸಮಯ ಸೇನೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತೀರಿ’ ಎಂದು ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಪುತ್ರಿ ಮರಿಯಂ ನವಾಜ್‌ ಅವರು ವಾಗ್ದಾಳಿ ನಡೆಸಿದರು.

ಪಿಡಿಎಂ ಅ. 25 ರಂದು ಕ್ವೆಟ್ಟಾ, ನ. 22 ರಂದು ಪೇಶಾವರ, ನ. 30 ರಂದು ಮುಲ್ತಾನ್ ಮತ್ತು ಡಿ.13 ರಂದು ಲಾಹೋರ್‌ನಲ್ಲಿ ರ‍್ಯಾಲಿಗಳನ್ನು ನಡೆಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು