ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಮೀನುಗಾರರ ಮೇಲೆ ನೌಕಾಪಡೆಯಿಂದ ಹಲ್ಲೆ ಆರೋಪ: ಭಾರತ ನಿರಾಕರಣೆ

Last Updated 18 ಜೂನ್ 2021, 10:57 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಮೀನುಗಾರರ ಮೇಲೆ ಭಾರತೀಯ ನೌಕಾಪಡೆಯು ಹಲ್ಲೆ ನಡೆಸಿದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಭಾರತ ನಿರಾಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.

ಜೂನ್ 4ರಂದು ಶ್ರೀಲಂಕಾದ 13 ಮೀನುಗಾರರ ಮೇಲೆ ಅಂತರರಾಷ್ಟ್ರೀಯ ಸಾಗರ ಮಟ್ಟದಲ್ಲಿ ಭಾರತೀಯ ನೌಕಪಡೆಯು ದೈಹಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿತ್ತು.

'ನಾವು ಮೀನುಗಾರರು ಎಂದು ಹೇಳಿದ ಹೊರತಾಗಿಯೂ ಅವರು ನಮ್ಮಿಂದ ಮಾದಕ ವಸ್ತುಗಳಿಗಾಗಿ ಬೇಡಿಕೆಯಿಟ್ಟರು' ಎಂದು ಶ್ರೀಲಂಕಾದ ಸ್ಥಳೀಯ 'ಹೀರು' ಟಿವಿಗೆ ನೀಡಿದ ಸಂದರ್ಶನದಲ್ಲಿ ಮೀನುಗಾರರಿಬ್ಬರು ದೂರಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಶ್ರೀಲಂಕಾದ ಮೀನುಗಾರರ ಗುಂಪಿನ ಮೇಲೆ ಭಾರತೀಯ ನೌಕಾಪಡೆಯು ದೈಹಿಕವಾಗಿ ಹಲ್ಲೆ ನಡೆಸಿದೆ ಎಂಬುದಕ್ಕೆ ಸಂಬಂಧಿಸಿದಂತೆ ಜೂನ್ 17ರಂದು ಪ್ರಸಾರವಾಗಿರುವ ಮಾಧ್ಯಮ ವರದಿಗಳು ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆಯು ನಡೆದಿಲ್ಲ ಎಂದು ತಿಳಿಸಿದೆ.

ಭಾರತೀಯ ನೌಕಾಪಡೆಯು ಶಿಸ್ತುಬದ್ಧ ಮತ್ತು ವೃತ್ತಿಪರ ಪಡೆಯಾಗಿದ್ದು, ತನ್ನ ಜವಾಬ್ದಾರಿಯನ್ನು ನಿಷ್ಪಕ್ಷ ರೀತಿಯಲ್ಲಿ ನಿರ್ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಾಪಿತ ದ್ವಿಪಕ್ಷೀಯ ಬಾಂಧವ್ಯ ಹಾಗೂ ತಿಳುವಳಿಕೆಯ ಮೂಲಕ ಭಾರತ ಹಾಗೂ ಶ್ರೀಲಂಕಾ ನಡುವಣ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಮಾನವೀಯ ರೀತಿಯಲ್ಲಿ ಬಗೆಹರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದೆ.

ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಇಂದು ರತ್ನಾಯಕೆ, ತನಿಖೆ ನಡೆಸಿದ ಬಳಿಕ ಭಾರತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ವರ್ಷ ಇದಕ್ಕೆ ಸಮಾನವಾದ ರೀತಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಆಕ್ರಮಿಸಿದೆ ಎಂದು ಆರೋಪಿಸಲಾಗಿತ್ತು.

ಹೊಸ ವರ್ಷಾರಂಭದಲ್ಲಿ ಶ್ರೀಲಂಕಾ ಭೇಟಿ ವೇಳೆ ಅಲ್ಲಿನ ಮೀನುಗಾರಿಕಾ ಸಚಿವ ಡೌಗ್ಲಾಸ್ ದೇವಾನಂದ ಭೇಟಿ ಮಾಡಿದ್ದ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT