ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಜಪಾನ್ ಸುರಕ್ಷಿತ ಇಂಡೋ-ಪೆಸಿಫಿಕ್‌ ಪ್ರದೇಶದ ಆಧಾರ ಸ್ತಂಭಗಳು: ಪ್ರಧಾನಿ ಮೋದಿ

Last Updated 23 ಮೇ 2022, 16:06 IST
ಅಕ್ಷರ ಗಾತ್ರ

ಟೋಕಿಯೊ: ಭಾರತ ಮತ್ತು ಜಪಾನ್‌ ದೇಶಗಳು ‘ಸಹಜ ಪಾಲುದಾರರು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಅಭಿವೃದ್ಧಿ ಪಯಣದಲ್ಲಿ ಜಪಾನ್‌ನ ಹೂಡಿಕೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತಿವೆ ಎಂದು ಹೇಳಿದ್ದಾರೆ.

ತಮ್ಮ ಎರಡು ದಿನಗಳ ಜಪಾನ್ ಪ್ರವಾಸದ ಮೊದಲ ದಿನವಾದ ಸೋಮವಾರ ಇಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಪಾನ್‌ನೊಂದಿಗೆ ಭಾರತದ ಸಂಬಂಧವು ಅಧ್ಯಾತ್ಮಿಕ, ಸಹಕಾರ ಮತ್ತು ಪರಸ್ಪರ ಅವಲಂಬನೆಯಿಂದ ಕೂಡಿದ್ದಾಗಿದೆ ಎಂದರು.

‘ಭಗವಾನ್‌ ಬುದ್ಧ ತೋರಿದ ಹಾದಿಯಲ್ಲಿ ಇಂದು ಜಗತ್ತು ಸಾಗುವ ಅಗತ್ಯ ಇದೆ. ಜಗತ್ತು ಎದುರಿಸುತ್ತಿರುವ ಹಿಂಸೆ, ಅರಾಜಕತೆ, ಭಯೋತ್ಪಾದನೆ, ಹವಾಮಾನ ಬದಲಾವಣೆಗಳಂತಹ ಸವಾಲುಗಳಿಂದ ಮನುಕುಲವನ್ನು ರಕ್ಷಿಸಲು ಇರುವ ಯೋಗ್ಯ ಹಾದಿಯೂ ಇದೇ ಆಗಿದೆ’ ಎಂದರು.

ಆಧಾರ ಸ್ತಂಭಗಳು: ‘ಶಾಂತಿ, ಸ್ಥಿರತೆ, ಸಮೃದ್ಧಿ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಭಾರತ–ಜಪಾನ್ ಪ್ರಮುಖ ಆಧಾರ ಸ್ತಂಭಗಳು. ನಮ್ಮ ಸ್ನೇಹದ ಪಯಣ 70 ಅದ್ಭುತ ವರ್ಷಗಳನ್ನು ಪೂರೈಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರುಜಪಾನ್‌ನ ಪ್ರಮುಖ ದಿನಪತ್ರಿಕೆ ‘ಯೊಮಿರಿ ಶಿಂಬುನ್‌’ಗೆ ತಿಳಿಸಿದರು.

ಈ ಲೇಖನದ ಲಿಂಕ್‌ ಅನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಜತೆಗೆ ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮೂಲಕವೂ ಹಂಚಿಕೊಂಡಿದ್ದಾರೆ.

ಕೋವಿಡೋತ್ತರ ಜಗತ್ತಿನಲ್ಲಿ ಭಾರತ–ಜಪಾನ್ ನಿಕಟ ಸಹಕಾರ ಮಹತ್ವದ್ದಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

‘ನಮ್ಮ ದೇಶಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿವೆ. ಜತೆಯಾಗಿ ನಾವು ಸ್ಥಿರ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶದ ಪ್ರಮುಖ ಸ್ತಂಭಗಳಾಗಿದ್ದೇವೆ. ನಾವು ವಿವಿಧ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಿದೆ’ ಎಂದು ಮೋದಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಜಪಾನಿನ ಜನರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವ ಅವಕಾಶವನ್ನು ಹೊಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಭಾರತೀಯ ಸಮುದಾಯದವರ ಜತೆ ಸಂವಾದ ನಡೆಸುತ್ತಿರುವ ಚಿತ್ರಗಳನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಪಾನ್‌ ಹುಡುಗನ ನಿರರ್ಗಳ ಹಿಂದಿಗೆ ಮಾರುಹೋದ ಮೋದಿ
ಟೋಕಿಯೊದ ಹೋಟೆಲ್‌ನಲ್ಲಿ ತಮ್ಮನ್ನು ಸ್ವಾಗತಿಸಲು ನಿಂತಿದ್ದ ಭಾರತೀಯ ಸಮುದಾಯದವರೊಂದಿಗೆ ಜಪಾನಿನ ಬಾಲಕ ಸಹ ಇದ್ದ. ನಿರರ್ಗಳವಾಗಿ ಹಿಂದಿಯಲ್ಲಿ ಪ್ರಧಾನಿಗೆ ಸ್ವಾಗತ ಕೋರಿದ ಆತನನ್ನು ಮೆಚ್ಚಿಕೊಂಡ ಮೋದಿ ಅವರು, ಆತ ಹಿಡಿದುಕೊಂಡಿದ್ದ ತ್ರಿವರ್ಣ ಧ್ವಜ ಬಣ್ಣದ ಡ್ರಾಯಿಂಗ್‌ ಮೇಲೆ ತಮ್ಮ ಹಸ್ತಾಕ್ಷರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT