ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಾತಿಗೆ ವಿಶ್ವದಲ್ಲಿ ಮನ್ನಣೆ: ಜೈಶಂಕರ್‌

Last Updated 25 ಸೆಪ್ಟೆಂಬರ್ 2022, 14:34 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ‘ಧ್ರುವೀಕರಣಗೊಂಡಿರುವ ಪ್ರಸ್ತುತ ಜಗತ್ತಿನಲ್ಲಿ ಭಾರತದ ಮಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ ಮತ್ತು ಜಗತ್ತಿನ ದಕ್ಷಿಣ ಭಾಗದ ಧ್ವನಿಯಾಗಿಯೂ ಭಾರತ ವ್ಯಾಪಕವಾಗಿ ಗ್ರಹಿಸಲ್ಪಟ್ಟಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅವರ ವರ್ಚಸ್ಸು ಹಾಗೂ ಅವರು ಜಾಗತಿಕ ಮಟ್ಟದಲ್ಲಿ ಮಾಡುತ್ತಿರುವ ಕೆಲಸಗಳು ಪ್ರಸ್ತುತ ಧ್ರುವೀಕೃತ ಜಗತ್ತಿನಲ್ಲಿ ಭಾರತದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ’ ಎಂದರು.

‘ನಮ್ಮ ಸಮಸ್ಯೆಗಳನ್ನು ಜಾಗತಿಕಮಟ್ಟದಲ್ಲಿ ಕೇಳಲಾಗುತ್ತಿಲ್ಲ ಎನ್ನುವ ದೊಡ್ಡ ಹತಾಶೆಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದೆ. ಈ ಭಾವನೆಗಳನ್ನು ಹೋಗಲಾಡಿಸುವ ಮತ್ತು ಧ್ವನಿ ನೀಡುವ ಯಾವುದಾದರೂ ರಾಷ್ಟ್ರವಿದ್ದರೆ ಅದು ಭಾರತ.ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಸದಾ ಅಭಿವೃದ್ಧಿಶೀಲ ರಾಷ್ಟ್ರಗಳ ಪರ ದನಿ ಎತ್ತುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೂ ಹೆಚ್ಚು ಬೆಳಕು ಚೆಲ್ಲುತ್ತದೆ’ ಎಂದು ಪ್ರತಿಪಾದಿಸಿದರು.

ವಿಶ್ವಸಂಸ್ಥೆಯ ಉನ್ನತಮಟ್ಟದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮೊದಲ ಹಂತದಲ್ಲಿ ನ್ಯೂಯಾರ್ಕ್‌ನಲ್ಲಿ ಒಂದು ವಾರ ವಾಸ್ತವ್ಯ ಮಾಡಿದ್ದ ಜೈಶಂಕರ್‌, ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ತಮ್ಮ ಸಹವರ್ತಿಗಳನ್ನು ಭೇಟಿ ಮಾಡಿ, ಹಲವು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಿದರು. ಭಾನುವಾರ ವಾಷಿಂಗ್ಟನ್‌ಗೆ ಪ್ರಯಾಣಿಸುವ ಮೂಲಕ ಎರಡನೇ ಹಂತದ ಭೇಟಿ ಆರಂಭಿಸಿದರು.

ಭಾರತಕ್ಕೆ ಅಮೆರಿಕ, ರಷ್ಯಾ, ಬ್ರೆಜಿಲ್‌ ಬೆಂಬಲ:

ವಿಶ್ವಸಂಸ್ಥೆಯ ಸುಧಾರಣೆಗಳ ವಿಷಯದಲ್ಲಿಅಂತರರಾಷ್ಟ್ರೀಯ ಸಮುದಾಯದಲ್ಲೂ ಪರಿಸ್ಥಿತಿ ಬದಲಾಗಿದೆ. ನಮ್ಮ ದನಿಗೆ ನೂಕುಬಲ ಸಿಕ್ಕಿದೆ. ಇದು ಉತ್ತಮ ಬೆಳವಣಿಗೆ ಎಂದುವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ಭಾರಿಯೂ ವಿಶ್ವಸಂಸ್ಥೆಯಲ್ಲಿ ಸುಧಾರಣೆ ಆಗಬೇಕೆಂದು ಚರ್ಚೆಯಾಗುತ್ತದೆ. ಆದರೆ, ಈ ಬಾರಿ ಇದರಲ್ಲಿ ಒಂದಿಷ್ಟು ಮಹತ್ವದ ಬೆಳವಣಿಗೆಗಳು ಆಗಿರುವುದನ್ನು ಎಲ್ಲರೂ ಗ್ರಹಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು, ಭದ್ರತಾ ಮಂಡಳಿಯಲ್ಲಿ ಕಾಯಂ ಮತ್ತು ಕಾಯಂ ಅಲ್ಲದ ಪ್ರತಿನಿಧಿ ದೇಶಗಳ ಸಂಖ್ಯೆ ಹೆಚ್ಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಹಾಗೆಯೇ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್‌ ಅವರು ಸಾಮಾನ್ಯ ಅಧಿವೇಶನದಲ್ಲಿ ನಿರ್ದಿಷ್ಟವಾಗಿ ಭಾರತದ ಹೆಸರು ಉಲ್ಲೇಖಿಸಿ, ‘ಭದ್ರತಾ ಮಂಡಳಿ ಮತ್ತಷ್ಟು ಪ್ರಜಾಸತ್ತಾತ್ಮಕವಾಗಬೇಕು. ಮಂಡಳಿಯ ಕಾಯಂ ಸ್ಥಾನಕ್ಕೆ ಭಾರತ ಮತ್ತು ಬ್ರೆಜಿಲ್‌ ಹೆಚ್ಚು ಅರ್ಹವಾಗಿವೆ’ ಎಂದು ರಷ್ಯಾದ ಬೆಂಬಲವನ್ನು ಘೋಷಿಸಿದ್ದಾರೆ. ಜತೆಗೆಹಲವು ದೇಶಗಳು ತಮ್ಮ ಹೇಳಿಕೆಗಳಲ್ಲಿ ಭಾರತದ ಹೆಸರು ಉಲ್ಲೇಖಿಸಿ, ಸುಧಾರಣೆ ಬೆಂಬಲಿಸಿದ್ದಾರೆ’ ಎಂದರು.

‘ಉಕ್ರೇನ್‌ ಬಿಕ್ಕಟ್ಟು ಶಮನಕ್ಕೆ ಮಾತುಕತೆಯೇ ಮಾರ್ಗ’

ಉಕ್ರೇನ್‌ ಸಂಘರ್ಷ ಶಮನಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ಮಾರ್ಗ ಎಂದು ಭಾರತವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪುನರುಚ್ಚರಿಸಿದೆ.

‘ಉಕ್ರೇನ್ ಸಂಘರ್ಷ ತೀವ್ರಗೊಂಡಂತೆನಾವು ಯಾರ ಕಡೆಗೆ ಇದ್ದೇವೆ ಎನ್ನುವ ಪ್ರಶ್ನೆಗಳು ಎದುರಾಗುತ್ತಲೇ ಇವೆ.ನಮ್ಮ ಉತ್ತರ, ಪ್ರತಿ ಬಾರಿಯೂ ನೇರ ಮತ್ತು ಪ್ರಾಮಾಣಿಕವಾಗಿರುತ್ತದೆ.ನಾವು ಯಾವಾಗಲೂ ಶಾಂತಿಯ ಕಡೆಗೆ ಇರುತ್ತೇವೆ. ನಾವು ಶಾಶ್ವತ ಶಾಂತಿಯ ಪರ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಪಾದಿಸಿದರು.

‘ರಷ್ಯಾ ನಮ್ಮ ಬಹುದೊಡ್ಡ ಪಾಲುದಾರ’

ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್‌ ಅವರ ಜತೆಗೆ ದ್ವಿಪಕ್ಷೀಯ ಸಹಕಾರದ ಮಾತುಕತೆ ನಡೆಸಿದ ವಿದೇಶಾಂಗ ಸಚಿವ ಜೈ.ಶಂಕರ್‌ ಅವರು,ಉಕ್ರೇನ್‌ ಬಿಕ್ಕಟ್ಟಿನ ನಡುವೆ ಅನೇಕ ಕ್ಷೇತ್ರಗಳಲ್ಲಿ ರಷ್ಯಾಭಾರತದ ಬಹುದೊಡ್ಡ ಪಾಲುದಾರನಾಗಿದೆ ಎಂದು ಹೇಳಿದ್ದಾರೆ.

‘ನಾವು ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಮಾತುಕತೆ ದ್ವಿಪಕ್ಷೀಯ ಸಹಕಾರದ ಮೇಲೆ ಕೇಂದ್ರೀಕರಿಸಿತ್ತು.ಉಕ್ರೇನ್, ಜಿ-20 ಮತ್ತು ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡೆವು’ ಎಂದು ಜೈಶಂಕರ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT