ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿಷಯ ಕೆದಕಿದ ಪಾಕ್‌ಗೆ ಭಾರತದಿಂದ ಮತ್ತೊಮ್ಮೆ ತಿರುಗೇಟು

Last Updated 5 ಅಕ್ಟೋಬರ್ 2021, 7:05 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಸಮಸ್ಯೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಭಾರತ ಬಲವಾಗಿ ತರಾಟೆಗೆ ತೆಗೆದುಕೊಂಡಿದೆ.

ಭಯೋತ್ಪಾದಕರಿಗೆ ಆತಿಥ್ಯ ನೀಡುವ ಅಭ್ಯಾಸ ಹೊಂದಿರುವ ದೇಶದಿಂದ ರಚನಾತ್ಮಕ ಕೊಡುಗೆಯನ್ನು ನಿರೀಕ್ಷಿಸಲು ಆಗದು ಎಂದು ಭಾರತ ದೂರಿದೆ. ಭಯೋತ್ಪಾದನೆಯ ‘ಕೇಂದ್ರ ಬಿಂದು’ ಆಗಿರುವ ಪಾಕಿಸ್ತಾನದಲ್ಲಿ ಜಗತ್ತನ್ನು ಅಸ್ಥಿರಗೊಳಿಸುವ ಅತಿದೊಡ್ಡ ಭಯೋತ್ಪಾದಕರ ಪಡೆಯೇ ಇದೆ ಎಂದು ಟೀಕಿಸಿದೆ.

ಪರಮಾಣು ವಸ್ತು ಮತ್ತು ತಂತ್ರಜ್ಞಾನವನ್ನು ಅಕ್ರಮವಾಗಿ ರಫ್ತು ಮಾಡುವಂತಹ ದೇಶದಿಂದ ಸಲಹೆ ಪಡೆಯುವ ಅಗತ್ಯ ಭಾರತಕ್ಕಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಸಲಹೆಗಾರ ಎ. ಅಮರನಾಥ್‌ ಸೋಮವಾರ ಹೇಳಿದ್ದಾರೆ.

‘ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸೇರಿದಂತೆ ಭಾರತದ ವಿರುದ್ಧ ಹಲವು ನಿರರ್ಥಕ ಮತ್ತು ಆಧಾರರಹಿತ ಆರೋಪಗಳನ್ನು ಪಾಕಿಸ್ತಾನ ಮಾಡಿದೆ. ಇವು ಭಾರತದ ಆಂತರಿಕ ವಿಷಯಗಳಾಗಿರುವ ಕಾರಣ ಪ್ರತಿಕ್ರಿಯೆಗೆ ಅರ್ಹವಲ್ಲ’ ಎಂದು ಅಮರನಾಥ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮುನೀರ್‌ ಅಕ್ರಂ ಅವರು, ನಿಶಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಕುರಿತ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸುವ ಹಕ್ಕನ್ನು ಚಲಾಯಿಸಿ ಮಾತನಾಡಿದ ಭಾರತದ ಅಮರನಾಥ್‌ ಅವರು, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಎಂದೆಂದಿಗೂ ಇರುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಇದು ಪಾಕಿಸ್ತಾನವು ಅಕ್ರಮವಾಗಿ ಅತಿಕ್ರಮಿಸಿರುವ ಪ್ರದೇಶಗಳನ್ನೂ ಒಳಗೊಂಡಿದೆ. ಪಾಕಿಸ್ತಾನ ತಾನು ಕಾನೂನು ಬಾಹಿರವಾಗಿ ಅತಿಕ್ರಮಿಸುವ ಪ್ರದೇಶವನ್ನು ಕೂಡಲೇ ತೆರವು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಭಯೋತ್ಪಾದಕರಿಗೆ ಆತಿಥ್ಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಪಾಕಿಸ್ತಾನದಿಂದ ರಚನಾತ್ಮಕ ಕೊಡುಗೆಯನ್ನು ಹೇಗೆ ನಿರೀಕ್ಷಿಸಬಹುದು’ ಎಂದು ಅವರು ಪ್ರಶ್ನಿಸಿದ್ದಾರೆ.

ಜವಾಬ್ದಾರಿಯುತ ದೇಶವಾಗಿ ಭಾರತವು ಅಂತರರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ತನ್ನ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನದಂತಹ ರಾಷ್ಟ್ರದಿಂದ ಯಾವುದೇ ಸಲಹೆಯ ಅಗತ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT