ಬುಧವಾರ, ಆಗಸ್ಟ್ 10, 2022
24 °C

ಮಲ್ಯ ವಿರುದ್ಧ ದಿವಾಳಿತನದ ಆದೇಶಕ್ಕೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ದಿವಾಳಿತನದ ಆದೇಶ ಹೊರಡಿಸುವಂತೆ ಕೋರಿ ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಲಂಡನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಲ್ಲಿನ ಚೀಫ್‌ ಇನ್ಸಾಲ್ವೆನ್ಸಿಯಸ್‌ ಆ್ಯಂಡ್‌ ಕಂಪನೀಸ್‌ ನ್ಯಾಯಾಲಯವು (ಐಸಿಸಿ) ಶುಕ್ರವಾರ ಇದರ ವಿಚಾರಣೆ ನಡೆಸಿತು.

ವಿಡಿಯೊ ಮೂಲಕ ನಡೆದ ವಿಚಾರಣೆಯ ವೇಳೆ ನ್ಯಾಯಾಧೀಶ ಮೈಕಲ್‌ ಬ್ರಿಗ್ಸ್‌ ಅವರು ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ದೀಪಕ್‌ ವರ್ಮಾ ಹಾಗೂ ಗೋಪಾಲ ಗೌಡ ಅವರು ಕ್ರಮವಾಗಿ ಮಲ್ಯ ಹಾಗೂ ಬ್ಯಾಂಕ್‌ಗಳ ಒಕ್ಕೂಟದ ಪರ ಭಾರತೀಯ ಕಾನೂನಿನ ಪರಿಣಿತರಾಗಿ ವಿಚಾರಣೆಯಲ್ಲಿ ಭಾಗವಹಿಸಿದ್ದರು.

‘ವಾಣಿಜ್ಯ ಉದ್ದಿಮೆಯಾಗಿರುವ ಬ್ಯಾಂಕ್‌ವೊಂದು ತಾನು ನೀಡಿರುವ ಸಾಲವನ್ನು ಹಿಂಪಡೆಯುವ ಸಲುವಾಗಿ ಸಾಲಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಆ ಹಕ್ಕು ಬ್ಯಾಂಕಿಗಿದೆ’ ಎಂದು ಬ್ಯಾಂಕ್‌ಗಳ ಒಕ್ಕೂಟದ ಪರ ಬ್ಯಾರಿಸ್ಟರ್‌ ಮಾರ್ಸಿಯಾ ಶೆಕರ್ಡೆಮಿಯಾನ್‌ ಅವರು ವಾದಿಸಿದರು.

ಮಲ್ಯ ಪರ ಬ್ಯಾರಿಸ್ಟರ್‌ ಫಿಲಿಪ್‌ ಮಾರ್ಷಲ್‌ ಇದನ್ನು ತೀವ್ರವಾಗಿ ವಿರೋಧಿಸಿದರು. ಒಂದು ಹಂತದಲ್ಲಿ ವಾದ–ಪ್ರತಿವಾದ ಜೋರಾಗಿದ್ದರಿಂದ ಕಾವೇರಿದ ವಾತಾವರಣ ನಿರ್ಮಾಣಗೊಂಡಿತ್ತು. ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶ ಬ್ರಿಕ್ಸ್‌ ಅವರು ಅಸಮಂಜಸ ಪ್ರಶ್ನೆಗಳನ್ನು ಕೇಳುವ ಮೂಲಕ ವಿಚಾರಣೆಯ ದಿಕ್ಕು ತಪ್ಪಿಸಬಾರದು ಎಂದು ಇಬ್ಬರೂ ಬ್ಯಾರಿಸ್ಟರ್‌ಗಳಿಗೆ ಸೂಚಿಸಿದರು. ಬಳಿಕ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಮಲ್ಯ ಕೂಡ ವಿಡಿಯೊ ಲಿಂಕ್‌ ಮೂಲಕ ವಿಚಾರಣೆ ಎದುರಿಸಿದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು