ಸೋಮವಾರ, ಅಕ್ಟೋಬರ್ 3, 2022
24 °C

ರಷ್ಯಾದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಭಾರತ, ಚೀನಾ ಭಾಗಿ: ಚೀನಾ ರಕ್ಷಣಾ ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಈ ತಿಂಗಳ ಕೊನೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್ -2022 ಮಿಲಿಟರಿ ತಾಲೀಮಿನಲ್ಲಿ ತಮ್ಮ ಸೈನಿಕರು ಭಾಗವಹಿಸಲಿದ್ದಾರೆ ಎಂದು ಚೀನಾ ಬುಧವಾರ ತಿಳಿಸಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಭಾಗವಹಿಸುವಿಕೆಯೂ ಇರಲಿದೆ ಎಂದು ಅದು ಹೇಳಿದೆ.

ಚೀನಾ ಮತ್ತು ರಷ್ಯಾ ಮಿಲಿಟರಿಗಳ ನಡುವಿನ ವಾರ್ಷಿಕ ಸಹಕಾರ ಯೋಜನೆ ಹಾಗೂ ಎರಡು ಕಡೆಯ ಒಮ್ಮತದ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಂದಿನ ದಿನಗಳಲ್ಲಿ ಮಿಲಿಟರಿ ತಾಲೀಮಿನಲ್ಲಿ ಭಾಗವಹಿಸಲು ಕೆಲವು ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಲ್ಲಿ ಭಾರತ, ಬೆಲಾರಸ್, ತಜಕಿಸ್ತಾನ್, ಮಂಗೋಲಿಯಾ ಮತ್ತು ಇತರ ದೇಶಗಳು ಸಹ ಭಾಗವಹಿಸಲಿವೆ ಎಂದು ಅದು ಹೇಳಿದೆ.

ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್-2022 ಸೇನಾ ಸಮರಾಭ್ಯಾಸದಲ್ಲಿ ಭಾರತೀಯ ಸೈನಿಕರು ಭಾಗವಹಿಸುವ ಕುರಿತು ಭಾರತೀಯ ಸೇನೆ ಅಥವಾ ರಕ್ಷಣಾ ಸಚಿವಾಲಯದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಳೆದ ವರ್ಷ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 17 ದೇಶಗಳು ಭಾಗವಹಿಸಿದ್ದ ರಷ್ಯಾದಲ್ಲಿ ನಡೆದ ಜಪಾಡ್– 2021ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸಿತ್ತು.

ವೋಸ್ಟಾಕ್-2022 ಸಮರಾಭ್ಯಾಸವು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೋಸ್ಟಾಕ್ -2022 ಸಮರಾಭ್ಯಾಸವು ರಷ್ಯಾದ ಸೇನಾ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಅವರ ನೇತೃತ್ವದಲ್ಲಿ ಪೂರ್ವ ಮಿಲಿಟರಿ ಜಿಲ್ಲೆಯ 13 ತರಬೇತಿ ಮೈದಾನಗಳಲ್ಲಿ ನಡೆಯಲಿದೆ ಎಂದು ಟಾಸ್ ವರದಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು