ಗುರುವಾರ , ಸೆಪ್ಟೆಂಬರ್ 16, 2021
29 °C

ಕಾಬೂಲ್ ವಾಯುಪ್ರದೇಶ ಬಂದ್: ದೆಹಲಿ–ಕಾಬೂಲ್ ಏರ್‌ ಇಂಡಿಯಾ ವಿಮಾನ ರದ್ದು

ಎಎಫ್‌ಪಿ/ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಿಯಂತ್ರಿಸಲು ಅಸಾಧ್ಯವಾದ ಮಟ್ಟಕ್ಕೆ ಪ್ರಯಾಣಿಕರ ಆಗಮನವಾಗುತ್ತಿರುವ ಹಿನ್ನೆಲೆಯಲ್ಲಿ ಕಾಬೂಲ್ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಅಲ್ಲಿನ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದರೆ, ಅಲ್ಲಿ ಯಾವುದೇ ವಿಮಾನ ಇಳಿಯಲು ಸಾಧ್ಯವಿಲ್ಲ. ಜನರನ್ನು ಹೊರತರಲು ಅಫ್ಗಾನಿಸ್ತಾನಕ್ಕೆ ಹಾರಲು ನಿಯೋಜಿಸಲಾದ ಏರ್ ಇಂಡಿಯಾ ವಿಮಾನವು ಇನ್ನುಮುಂದೆ ಅಲ್ಲಿಗೆ ತೆರಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಅಮೆರಿಕದಿಂದ ಬರುವ ಏರ್ ಇಂಡಿಯಾ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎಐ-126 (ಚಿಕಾಗೋ-ನವದೆಹಲಿ) ಮತ್ತು ಎಐ-174 (ಸ್ಯಾನ್ ಫ್ರಾನ್ಸಿಸ್ಕೋ-ನವದೆಹಲಿ) ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಶಾರ್ಜಾ ಮೂಲಕ ಭಾರತಕ್ಕೆ ಆಗಮಿಸಲಿವೆ. ಭಾರತದಿಂದ ಅಮೆರಿಕಗೆ ಹೊರಡುವ ವಿಮಾನಗಳನ್ನು ಮಾರ್ಗ ಬದಲಿಸಲು ಏರ್‌ ಇಂಡಿಯಾ ಸಿದ್ಧತೆ ನಡೆಸಿದೆ.

ಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಎಲ್ಲಾ ವಿಮಾನಗಳ ಮಾರ್ಗ ಬದಲಿಸುವಂತೆ ಕೇಳಿದೆ. ಕಾಬೂಲ್ ವಾಯುಪ್ರದೇಶದ ಮೂಲಕ ಯಾವುದೇ ಸಾರಿಗೆಯನ್ನು ನಿಯಂತ್ರಿಸಲಾಗುವುದಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಚಿಕಾಗೊದಿಂದ ದೆಹಲಿಗೆ ಬರುವ ಏರ್ ಇಂಡಿಯಾ ವಿಮಾನವು ತನ್ನ ಮಾರ್ಗ ಬದಲಾಯಿಸಿದೆ. ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ನಂತರ ನಿರ್ಗಮಿಸಿತು, ಬಾಕುವಿನಿಂದ ದೆಹಲಿಗೆ ಹೋಗುವ ಟೆರ್ರಾ ಏವಿಯಾ ವಿಮಾನವೂ ಸಹ ಮಾರ್ಗ ಬದಲಿಸಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್‌ 24 ಟ್ವೀಟ್ ಮಾಡಿದೆ.

‘ಜನ ಜಂಗುಳಿ ಮತ್ತು ಈ ಸಮಯ ಬಳಸಿಕೊಂಡು ಆಗುತ್ತಿರುವ ಲೂಟಿಯನ್ನು ತಡೆಗಟ್ಟಲು ಹಮೀದ್ ಕರ್ಜೈ ವಿಮಾನ ನಿಲ್ದಾಣದಿಂದ ಯಾವುದೇ ವಾಣಿಜ್ಯ ವಿಮಾನಗಳು ಇರುವುದಿಲ್ಲ. ದಯವಿಟ್ಟು ವಿಮಾನ ನಿಲ್ದಾಣಕ್ಕೆ ಧಾವಿಸಬೇಡಿ’ ಎಂದು ಕಾಬೂಲ್ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಕಾಬೂಲ್ ವಿಮಾನ ನಿಲ್ದಾಣ ‘ಅನಿಯಂತ್ರಿತ’ವಾಗಿದೆ ಎಂದು ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಏರ್ ಇಂಡಿಯಾ ತನ್ನ ದೆಹಲಿ-ಕಾಬೂಲ್-ದೆಹಲಿ ವಿಮಾನವನ್ನು ವಿಮಾನವನ್ನು ರದ್ದುಗೊಳಿಸಿದೆ ಎಂದು ಹಿರಿಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು