ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್: ಸಾವಿನ ಸಂಖ್ಯೆ ನೂರಕ್ಕೆ ಏರಿಕೆ, ಮತ್ತಷ್ಟು ಹೆಚ್ಚುವ ಆತಂಕ!

15 ವರ್ಷದಲ್ಲೇ ಅತ್ಯಂತ ಭೀಕರ ದಾಳಿ : ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕ
Last Updated 27 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಕಾಬೂಲ್‌ : ಕಾಬೂಲ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗುರುವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 100ಕ್ಕೆ ಏರಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಮತ್ತಷ್ಟು ದಾಳಿ ನಡೆಯುವ ಅಪಾಯ ಇರುವ ಕಾರಣ ಹಲವು ದೇಶಗಳು ತೆರವು ಕಾರ್ಯಾಚರಣೆಯನ್ನು ಶುಕ್ರವಾರ ತ್ವರಿತಗೊಳಿಸಿವೆ.

ಇದು 15 ವರ್ಷಗಳಲ್ಲಿಯೇ ಅಫ್ಗಾನಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಎನಿಸಿದೆ.

ಮೃತಪಟ್ಟವರಲ್ಲಿ ಬಹುತೇಕ ಮಂದಿ ಅಫ್ಗನ್ ಪ್ರಜೆಗಳು. ಅಮೆರಿಕ ಸೇನೆಯ 13 ಮಂದಿ ಮೃತಪಟ್ಟಿದ್ದಾರೆ. ಅಮೆರಿಕ ಸೇನೆಯ 18 ಜನರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಗಡುವಿನೊಳಗೆ ತೆರವು ಕಾರ್ಯಾಚರಣೆಯನ್ನು ಮುಗಿಸಲು ಯತ್ನಿಸುತ್ತೇವೆ ಎಂದು ಅಮೆರಿಕ ಹೇಳಿದೆ.

ದಾಳಿಯಲ್ಲಿ ತಾಲಿಬಾನ್ ಸೇನೆಯ 18 ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಗುರುವಾರ ರಾತ್ರಿ ಹೇಳಿತ್ತು.
ಆದರೆ, ತಮ್ಮ ಸೇನೆಯ ಒಬ್ಬರೂ ದಾಳಿಯಲ್ಲಿ ಮೃತಪಟ್ಟಿಲ್ಲ ಎಂದು ಶುಕ್ರವಾರ ಬೆಳಿಗ್ಗೆ ಹೇಳಿದೆ. ತಾಲಿಬಾನ್‌ನ ಹಲ
ವರು ದಾಳಿಯಲ್ಲಿ ಸತ್ತಿದ್ದಾರೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ.

ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿಯ ಕೊಳಚೆ ಚರಂಡಿಯ ಸನಿಹದಲ್ಲೇ ದಾಳಿ ನಡೆದಿದೆ. ಆ ಚರಂಡಿಯಲ್ಲೇ ಹತ್ತಾರು ದೇಹಗಳು ಛಿದ್ರವಾಗಿ ಬಿದ್ದಿರುವ ಚಿತ್ರ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ದೇಹಗಳು ಮತ್ತು ಮಾಂಸದ ತುಣುಕುಗಳು ಗಾಳಿಯಲ್ಲಿ ಹಾರುತ್ತಿದ್ದವು. ಚರಂಡಿಯ ನೀರು ಕ್ಷಣಮಾತ್ರದಲ್ಲಿ ರಕ್ತದ ಹೊಳೆಯಾಯಿತು’ ಎಂದು ಗಾಯಾಳುವೊಬ್ಬರು ದಾಳಿಯ ಭೀಕರತೆಯನ್ನು ವಿವರಿಸಿದ್ದಾರೆ.

ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ಸ್ಥಳದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮತ್ತು ಮೃತದೇಹಗಳ ತೆರವು ಕಾರ್ಯಾಚರಣೆ ಶುಕ್ರವಾರ ನಸುಕಿನವರೆಗೆ ನಡೆದಿತ್ತು. ಆದರೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಪರಿಕರಗಳು ಮತ್ತು ಔಷಧದ ಕೊರತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಾಣಿಜ್ಯ ಮತ್ತು ಸರಕು ಸಾಗಣೆ ವಿಮಾನ ಸಂಚಾರ ಸ್ಥಗಿತವಾಗಿರುವ ಕಾರಣ ವೈದ್ಯಕೀಯ ಪರಿಕರ, ಔಷಧದ ಪೂರೈಕೆ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT