ಲಾಹೋರ್/ಇಸ್ಲಾಮಾಬಾದ್: ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಲಾಹೋರ್‌ನಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಘರ್ಷಣೆಯು ದೇಶದ ಪ್ರತಿಷ್ಠೆಯನ್ನು ಜಾಗತಿಕವಾಗಿ ಹಾಳು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಲಾಹೋರ್ ಹೈಕೋರ್ಟ್, ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷ ಐತಿಹಾಸಿಕ ‘ಮಿನಾರ್–ಎ– ಪಾಕಿಸ್ತಾನ’ ಬಳಿ ನಡೆಸಲು ಯೋಜಿಸಿದ್ದ ರ್‍ಯಾಲಿಗೆ ಗುರುವಾರ ನಿಷೇಧ ಹೇರಿದೆ.
ಪಂಜಾಬ್ ಪ್ರಾಂತ್ಯದ ಚುನಾವಣಾ ಭಾಗವಾಗಿ ಇದೇ 19ರಂದು ‘ಮಿನಾರ್–ಎ–ಪಾಕಿಸ್ತಾನ’ ಬಳಿ ಸಾರ್ವಜನಿಕ ಸಭೆಯನ್ನು ಆಯೋಜಿಸುವುದಾಗಿ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮಂಗಳವಾರ ಘೋಷಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ತಾರಿಕ್ ಸಲೀಂ ಶೇಖ್, ಲಾಹೋರ್‌ನ ಪರಿಸ್ಥಿತಿಯು ಪಾಕಿಸ್ತಾನದ ಪ್ರತಿಷ್ಠೆಯನ್ನು ಜಾಗತಿಕವಾಗಿ ಹಾಳುಗೆಡವಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ರ್‍ಯಾಲಿಗಳನ್ನು ನಡೆಸಬೇಕಿದ್ದರೆ 15 ದಿನ ಮುನ್ನವೇ ಮಾಹಿತಿ ನೀಡಬೇಕು. ಆಗ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಆಡಳಿತ ನಡೆಸುವವರಿಗೆ ಸಾಧ್ಯವಾಗುತ್ತದೆ’ ಎಂದು ನ್ಯಾಯಮೂರ್ತಿ ಆದೇಶಿಸಿದರು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಇಮ್ರಾನ್ ಖಾನ್ ಅವರ ಜಾಮೀನು ರಹಿತ ಬಂಧನದ ವಾರಂಟ್ ಅನುಷ್ಠಾನ, ಭದ್ರತಾ ಯೋಜನೆ ಹಾಗೂ ಸೆಕ್ಷನ್ 144ರ ಹೇರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪಿಟಿಐ ನಾಯಕರು ತಮ್ಮ ವಿಚಾರವನ್ನು ಪಂಜಾಬ್ ಪ್ರಾಂತ್ಯದ ಐಜಿಪಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿ ಒಮ್ಮತಕ್ಕೆ ಬರುವಂತೆ ನ್ಯಾಯಮೂರ್ತಿ ನಿರ್ದೇಶನ ನೀಡಿದರು.
ದುಬಾರಿ ಉಡುಗೊರೆಗಳನ್ನು ವೈಯಕ್ತಿಕ ಲಾಭಕ್ಕೆ ಮಾರಿಕೊಂಡ ‘ತೋಶಾಖಾನಾ’ ಪ್ರಕರಣದಲ್ಲಿ, ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಬಂದಿದ್ದ ಭದ್ರತಾ ಸಿಬ್ಬಂದಿ ಮತ್ತು ಖಾನ್ ಬೆಂಬಲಿಗರ ನಡುವೆ ಮಂಗಳವಾರ ಘರ್ಷಣೆ ನಡೆದಿತ್ತು. ಈ ವೇಳೆ 54 ಪೊಲೀಸರು ಸೇರಿ 60 ಜನರು ಗಾಯಗೊಂಡಿದ್ದರು. ಹೀಗಾಗಿ ಖಾನ್ ಬಂಧನಕ್ಕೆ ಬುಧವಾರ ಹಿರಿಯ ರೇಂಜರ್‌ಗಳನ್ನು ನಿಯೋಜಿಸಲಾಗಿತ್ತು.
ಲಾಹೋರ್ ಹೈಕೋರ್ಟ್ ಆದೇಶದ ಕಾರಣ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಬುಧವಾರ ಸ್ಥಗಿತಗೊಳಿಸಿದ್ದರು.
ವಾರಂಟ್ ರದ್ದು ಕೋರಿದ್ದ ಅರ್ಜಿ ವಜಾ:
ತೋಶಾಖಾನ್ ಪ್ರಕರಣದಲ್ಲಿ ತಮ್ಮ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ರದ್ದುಪಡಿಸಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಗುರುವಾರ ವಜಾಗೊಳಿಸಿದರು.
ಖಾನ್ ವಿರುದ್ಧ ಚುನಾವಣಾ ಆಯೋಗ ದಾಖಲಿಸಿರುವ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ನಡೆಸಿದ ಅವರು, ಮಾರ್ಚ್ 18ರೊಳಗೆ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿದರು.
‘ಖಾನ್ ಅವರು ನಿರ್ದಿಷ್ಟ ದಿನಾಂಕದಂದು ಹಾಜರಾಗುತ್ತಾರೆ ಎಂಬ ಭರವಸೆಯ ಆಧಾರದ ಮೇಲೆ ವಾರಂಟ್‌ಗಳನ್ನು ರದ್ದುಪಡಿಸಲು ಆಗದು’ ಎಂದು ಅವರು ಹೇಳಿದರು.
‘ಕಾನೂನು ಪ್ರಕಾರ ಖಾನ್ ಅವರನ್ನು ಬಂಧಿಸಿ, ಮಾರ್ಚ್ 18 ರಂದು ಹಾಜರುಪಡಿಸಿ’ ಎಂದು ಪೊಲೀಸರಿಗೆ ಸೂಚಿಸಿದ ನ್ಯಾಯಾಧೀಶರು, ‘ಕಾನೂನು ಎಲ್ಲರಿಗೂ ಒಂದೇ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಬರಬೇಕು ಎಂದು ನಾವು ಬಯಸುತ್ತೇವೆ. ಆದರೆ ಅವರೇಕೆ ಬರುತ್ತಿಲ್ಲ? ಕಾರಣವೇನು? ಕಾನೂನಿನ ಪ್ರಕಾರ ಖಾನ್ ಅವರು ಪೊಲೀಸರಿಗೆ ಸಹಕರಿಸಬೇಕೇ ಹೊರತು ವಿರೋಧಿಸಬಾರದು’ ಎಂದು ಅವರು ಖಡಕ್ ಆಗಿ ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ನಿರಾಳ:
ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ವಿರುದ್ಧ ಹೊರಡಿಸಿಲಾಗಿದ್ದ ಬಂಧನದ ವಾರಂಟ್ ಅನ್ನು ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಫೈಜಾನ್ ಹೈದರ್ ಗಿಲಾನಿ ರದ್ದುಗೊಳಿಸಿದರು. ಆ ಕುರಿತ ವಿಚಾರಣೆಯನ್ನು ಇದೇ 20ರಂದು ನಡೆಸಲಾಗುವುದು, ಅಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದರು.
ಈ ಹಿಂದೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಖಾನ್, ನ್ಯಾಯಾಧೀಶರಾದ ಝೆಬಾ ಚೌಧರಿ ಅವರಿಗೆ ಬೆದರಿಕೆ ಹಾಕಿದ್ದರು. ಇದರ ಪರಿಣಾಮ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
–––
ಪೊಲೀಸ್ ಕಾರ್ಯಾಚರಣೆ: ಇನ್ನೊಂದು ದಿನ ಸ್ಥಗಿತಕ್ಕೆ ಸೂಚನೆ
ಲಾಹೋರ್ (ಪಿಟಿಐ): ಇಮ್ರಾನ್ ಖಾನ್ ಬಂಧನಕ್ಕೆ ಪೊಲೀಸರು ಕೈಗೊಂಡಿದ್ದ ಕಾರ್ಯಾಚರಣೆಯನ್ನು ಇನ್ನೊಂದು ದಿನದ ಮಟ್ಟಿಗೆ (ಶುಕ್ರವಾರದವರೆಗೆ) ಸ್ಥಗಿತಗೊಳಿಸುವಂತೆ ಲಾಹೋರ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಪೊಲೀಸ್ ಕಾರ್ಯಾಚರಣೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಇದೀಗ ಅದನ್ನು ಶುಕ್ರವಾರದವರೆಗೆ ವಿಸ್ತರಿಸಿದೆ ಎಂದು ಖಾನ್ ಅವರ ಸಹಚರ ಫವದ್ ಚೌಧರಿ ಹೇಳಿದ್ದಾರೆ.
ಖಾನ್ ವಿರುದ್ಧ ಹೊಸ ಪ್ರಕರಣ:
ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಹೊಸ ಎಫ್‌ಐಆರ್ ಅನ್ನು ಪಂಜಾಬ್ ಪ್ರಾಂತ್ಯದ ಪೊಲೀಸರು ಗುರುವಾರ ದಾಖಲಿಸಿದ್ದಾರೆ.
ತನ್ನನ್ನು ಬಂಧಿಸಲು ಬಂದ ಪೊಲೀಸರ ಕಾರ್ಯಾಚರಣೆಯನ್ನು ತಡೆಯಲು ಹಾಗೂ ಪೊಲೀಸರ ವಿರುದ್ಧ ದಾಳಿ ನಡೆಸಲು ಖಾನ್ ಅವರು ತಮ್ಮ ನಿವಾಸದ ಆವರಣದಲ್ಲಿದ್ದ 2,500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪ್ರಚೋದಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪಿಟಿಐ ಬೆಂಬಲಿಗರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು, ಪೊಲೀಸರು ಮತ್ತು ರೇಂಜರ್‌ಗಳ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು. ಅಲ್ಲದೆ ಹಲವು ಪೊಲೀಸರು ಗಾಯಗೊಳ್ಳುವಂತೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.