ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಜ್ ಟ್ರಸ್‌ ಬ್ರಿಟನ್‌ ಹೊಸ ಪ್ರಧಾನಿ: ಭಾರತ ಮೂಲದ ರಿಷಿ ಸುನಕ್‌ಗೆ ಸೋಲು

Last Updated 5 ಸೆಪ್ಟೆಂಬರ್ 2022, 23:11 IST
ಅಕ್ಷರ ಗಾತ್ರ

ಲಂಡನ್‌ : ಬ್ರಿಟನ್‌ ವಿದೇಶಾಂಗ ಸಚಿವೆ ಲಿಜ್‌ ಟ್ರಸ್‌ ಅವರು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದು,ಮಾರ್ಗರೇಟ್‌ ಥ್ಯಾಚರ್‌ ಮತ್ತು ಥೆರೆಸಾ ಮೇ ಅವರ ನಂತರ ದೇಶ ಮುನ್ನಡೆಸುವ ಮೂರನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾ ಗಲಿದ್ದಾರೆ.

ಹಗರಣ ಮತ್ತು ಸಂಪುಟ ಸದಸ್ಯರ ಅವಿಶ್ವಾಸದಿಂದ ಅಧಿಕಾರ ಕಳೆದುಕೊಂಡಿರುವ ಬೋರಿಸ್‌ ಜಾನ್ಸನ್‌ ಅವರ ನಂತರಬ್ರಿಟನ್‌ನ ಮುಂದಿನ ಪ್ರಧಾನಿ ಯಾರು ಆಗಲಿದ್ದಾರೆಂಬ ಹಲವು ತಿಂಗಳುಗಳ ಕುತೂಹಲಕ್ಕೆ ಸೋಮವಾರ ಅಂತಿಮ ತೆರೆ ಬಿದ್ದಿತು.

ಬ್ರಿಟನ್‌ ಟೋರಿ ನಾಯಕತ್ವ ಚುನಾವಣಾ ಅಖಾಡದಲ್ಲಿ 47ರ ಹರೆಯದ ಲಿಜ್‌ ಟ್ರಸ್‌ ಅವರಿಗೆ ನಿರೀಕ್ಷಿತ ಗೆಲುವು ಸಿಕ್ಕಿದೆ. ಬೋರಿಸ್‌ ಜಾನ್ಸನ್‌ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಸುಮಾರು 21 ಸಾವಿರ ಮತಗಳ ಅಂತರದಿಂದ ಮಣಿಸಿ, ಟೋರಿ ನಾಯಕಿ ಮತ್ತು ಬ್ರಿಟನ್‌ ಪ್ರಧಾನಿ ಹುದ್ದೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2015ರ ಚುನಾವಣೆ ನಂತರ ಕನ್ಸರ್ವೇಟಿವ್‌ ಪಕ್ಷದಿಂದ ಆಯ್ಕೆಯಾದ ನಾಲ್ಕನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಟ್ರಸ್‌.

ಚಲಾವಣೆಯಾದ ಸುಮಾರು 1.70 ಲಕ್ಷ ಟೋರಿ ಸದಸ್ಯರ ಆನ್‌ಲೈನ್‌ ಮತ್ತು ಅಂಚೆ ಮತಗಳ ಪೈಕಿ ಟ್ರಸ್‌ ಅವರಿಗೆ 81,326 ಮತಗಳು ಲಭಿಸಿದರೆ, ಪ್ರತಿಸ್ಪರ್ಧಿ ರಿಷಿ ಸುನಕ್ ಅವರಿಗೆ 60,399 ಮತಗಳು ಲಭಿಸಿದವು.654 ಮತಗಳು ತಿರಸ್ಕೃತಗೊಂಡಿವೆ.ಭಾರತ ಉಪಖಂಡವನ್ನು ಸುಮಾರು ಮೂರು ಶತಮಾನಗಳ ಕಾಲ ಆಳಿದ ಬ್ರಿಟನ್‌ ಅನ್ನು ಭಾರತೀಯ ಸಂಜಾತರೊಬ್ಬರು ಮುನ್ನಡೆಸುವ ಮತ್ತು ‘10 ಡೌನಿಂಗ್ ಸ್ಟ್ರೀಟ್’ನಲ್ಲಿ ಉನ್ನತ ಹುದ್ದೆ ಅಲಂಕರಿಸುವಐತಿಹಾಸಿಕ ಅವಕಾಶವೊಂದು ತಪ್ಪಿಹೋದಂತಾಯಿತು.

ಬೋರಿಸ್ ಜಾನ್ಸನ್ ಅವರು ತಮ್ಮ ರಾಜೀನಾಮೆಯ ಅಧಿಕೃತ ಅಂಗೀಕಾರಕ್ಕೆ ಮತ್ತು ತಮ್ಮ ಉತ್ತರಾಧಿಕಾರಿಗೆ ಸರ್ಕಾರ ರಚಿಸಲು ಅನುಮತಿ ಪಡೆಯಲು ರಾಣಿ ಎಲಿಜಬೆತ್ ಅವರ ಭೇಟಿಗಾಗಿ ಸ್ಕಾಟ್ಲೆಂಡ್‌ಗೆ ಪ್ರಯಾಣ ಬೆಳೆಸಿದರು.

ರಾಣಿ ಎರಡನೇ ಎಲಿಜಬೆತ್‌ ಅವರ ಆಳ್ವಿಕೆಯಲ್ಲಿ ಟ್ರಸ್‌ ಅವರು ದೇಶದ 15ನೇ ಪ್ರಧಾನಿ ಆಗಲಿದ್ದಾರೆ.

‘ಚುನಾವಣೆಯಲ್ಲಿ ತೀವ್ರ ಹಣಾಹಣಿ ಇತ್ತು. ನನ್ನನ್ನು ಆಯ್ಕೆ ಮಾಡಿದ ನಾಯಕರಿಗೆ ಈ ಗೌರವ ಸಲ್ಲುತ್ತದೆ. ಬ್ರಿಟನ್‌ನ ಆರ್ಥಿಕ ಬೆಳವಣಿಗೆ ಮತ್ತು ತೆರಿಗೆಗಳ ಕಡಿತಕ್ಕೆ ದಿಟ್ಟ ಯೋಜನೆಗಳನ್ನು ಕೈಗೊಳ್ಳುವೆ’ ಎಂದು ಟ್ರಸ್‌ ಟ್ವೀಟ್‌ ಮಾಡಿದ್ದಾರೆ.

‘ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವುದು ಹೆಮ್ಮೆ ಎನಿಸಿದೆ. ಮಹಾನ್ ದೇಶದ ಮುಂದಾಳತ್ವ ವಹಿಸಲು ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಕಠಿಣ ಸಮಯದಲ್ಲಿ ನಮ್ಮ ಆರ್ಥಿಕತೆ ಬೆಳೆಸಲು ಮತ್ತು ದೇಶದ ಸಾಮರ್ಥ್ಯ ಸಾಬೀತುಪಡಿಸಲು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಟ್ರಸ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮೋದಿ ಅಭಿನಂದನೆ: ಟ್ರಸ್‌ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮ ನಾಯಕತ್ವದಲ್ಲಿ ಭಾರತ ಮತ್ತು ಬ್ರಿಟನ್‌ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಆಶಿಸುವೆ’ ಎಂದು ಹೇಳಿದ್ದಾರೆ.

ಮೋದಿ ಅಭಿನಂದನೆ: ಟ್ರಸ್‌ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮ ನಾಯಕತ್ವದಲ್ಲಿ ಭಾರತ ಮತ್ತು ಬ್ರಿಟನ್‌ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಆಶಿಸುವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT