ಶನಿವಾರ, ಅಕ್ಟೋಬರ್ 16, 2021
23 °C
ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ಸಂಸ್ಥೆಯ ಅಧಿಕಾರಿಗಳ ಸಭೆ

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಉತ್ಸುಕ: ಅಮೆರಿಕದ ‘ಬೇನ್‌ ಕ್ಯಾಪಿಟಲ್‌’ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಸ್ಟನ್‌: ‘ಭಾರತದಲ್ಲಿ ಕಂಪನಿಯ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ಸುಕರಾಗಿದ್ದೇವೆ’ ಎಂದು ಅಮೆರಿಕದ ಖಾಸಗಿ ವಲಯದ ಹೂಡಿಕೆ ಸಂಸ್ಥೆ ‘ಬೇನ್‌ ಕ್ಯಾಪಿಟಲ್‌’ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಂಸ್ಥೆಯ ಸಹಚೇರ್ಮನ್‌ ಸ್ಟೀಫನ್ ಪಗ್ಲಿಯುಕಾ ಹಾಗೂ ಸಹ ವ್ಯವಸ್ಥಾಪಕ ಪಾಲುದಾರ ಜಾನ್‌ ಕನಾಟನ್‌ ಈ ವಿಷಯ ತಿಳಿಸಿದ್ದಾರೆ.

‘ಹೂಡಿಕೆ ಹಾಗೂ ಉದ್ಯಮ ಬೆಳವಣಿಗೆ ದೃಷ್ಟಿಯಿಂದ ಅಮೆರಿಕ ಹಾಗೂ ಭಾರತಕ್ಕೆ ಮುಂದಿನ ದಶಕ ಮಹತ್ವದ್ದು’ ಎಂದು ಕಂಪನಿಯ ಈ ಇಬ್ಬರು ಉನ್ನತ ಅಧಿಕಾರಿಗಳು ಅಭಿಪ್ರಾಯಪಟ್ಟರು.

‘ಕಳೆದ 10–12 ವರ್ಷಗಳಿಂದ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಅದರಲ್ಲೂ, ಬ್ಯಾಂಕಿಂಗ್, ಹೊರಗುತ್ತಿಗೆ ಹಾಗೂ ಔಷಧ ಉತ್ಪಾದನಾ ಕ್ಷೇತ್ರಗಳಲ್ಲಿ ನಮ್ಮ ಹೂಡಿಕೆ ಅಧಿಕವಾಗಿದೆ. ಭಾರತ ಸುಧಾರಣಾ ಕ್ರಮಗಳನ್ನು ಕೈಗೊಂಡಾಗಲೆಲ್ಲಾ ನಮ್ಮ ಹೂಡಿಕೆಗೆ ವೇಗ ಸಿಗುತ್ತದೆ’ ಎಂದು ಕನಾಟನ್ ಹೇಳಿದರು.

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗಿನ ಚರ್ಚೆ ಅದ್ಭುತವಾಗಿತ್ತು. ಗುಜರಾತ್‌ನಲ್ಲಿನ ‘ಹಣಕಾಸು ಸೇವೆಗಳ ಜಿಲ್ಲೆ’ ಕುರಿತಾಗಿಯೂ ಚರ್ಚಿಸಲಾಯಿತು’ ಎಂದು ಸಭೆ ಬಳಿಕ ಪಗ್ಲಿಯುಕಾ ಹೇಳಿದರು.

ವಿಶ್ವ ಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳುವ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಅವರು ‘ಜಿ–20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್‌ ಬ್ಯಾಂಕ್ ಗವರ್ನರ್‌’ (ಎಫ್‌ಎಂಸಿಬಿಜಿ) ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು