ಶನಿವಾರ, ಜುಲೈ 2, 2022
27 °C

ಪಾಕಿಸ್ತಾನದ ಸಿಯಾಲ್‌ಕೋಟ್‌ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಸಿಯಾಲ್‌ಕೋಟ್‌ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

ಸಿಯಾಲ್‌ಕೋಟ್‌: ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಸಿಯಾಲ್‌ಕೋಟ್‌ ನಗರದಲ್ಲಿ ಭಾನುವಾರ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಪಂಜಾಬ್‌ ಪ್ರಾಂತ್ಯದ ಕಂಟೋನ್ಮೆಂಟ್‌ ವಲಯದಲ್ಲಿ ಹಲವು ಬಾರಿ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.

ಶಸ್ತ್ರಾಸ್ತ್ರಗಳು, ಮದ್ದು–ಗುಂಡುಗಳ ಸಂಗ್ರಹಾಗಾರದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸಿಯಾಲ್‌ಕೋಟ್‌ ಸೇನಾ ನೆಲೆಯಲ್ಲಿ ಹಲವು ಸಲ ಸ್ಫೋಟ ಸಂಭವಿಸಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಸ್ಫೋಟದ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಮೂರು ಬಾರಿ ಸ್ಫೋಟ ಆಗಿರುವುದಾಗಿ ಹಂಚಿಕೊಂಡಿದ್ದಾರೆ. ಸ್ಫೋಟ ಆಗಿರುವ ವಲಯದಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ವಿಡಿಯೊಗಳಲ್ಲಿ ಕಾಣಬಹುದಾಗಿದೆ.

 

ಬ್ರಿಟಿಷ್ ಭಾರತ ಸೇನೆಯು 1852ರಲ್ಲಿ ಸಿಯಾಲ್‌ಕೋಟ್‌ ಕಂಟೋನ್ಮೆಂಟ್‌ ಸ್ಥಾಪಿಸಿತ್ತು. ಇದು ಪಾಕಿಸ್ತಾನದ ಅತ್ಯಂತ ಪ್ರಮುಖ ಮತ್ತು ಹಳೆಯ ಸೇನಾ ನೆಲೆಯಾಗಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸರ್ಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಸಮಯದಲ್ಲಿ ಈ ಘಟನ ಸಂಭವಿಸಿದೆ.

 

ಪಾಕಿಸ್ತಾನ್‌ ಮುಸ್ಲಿಂ ಲೀಗ್‌ (ನವಾಜ್‌) ಪಕ್ಷದ ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಸುಮಾರು 100 ಸದಸ್ಯರು ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮಾರ್ಚ್‌ 8ರಂದು ನೋಟಿಸ್‌ ಜಾರಿ ಮಾಡಿದ್ದಾರೆ. ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಏರಿಕೆಗೆ ಇಮ್ರಾನ್‌ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷವೇ ನೇರ ಕಾರಣ ಎಂದು ದೂರಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು