ಗುರುವಾರ , ನವೆಂಬರ್ 26, 2020
20 °C
ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ

ಅಮೆರಿಕ–ಭಾರತ ಸಚಿವರ ಮಟ್ಟದ ಸಭೆ ನಾಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕ ಮತ್ತು ಭಾರತದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ (2+2) ಮಾತುಕತೆ ಮಂಗಳವಾರ ನವದೆಹಲಿಯಲ್ಲಿ ನಡೆಯಲಿದೆ.

ದ್ವಿಪಕ್ಷೀಯ ಸಂಬಂಧಗಳು ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಕುರಿತು ಪ್ರಮುಖವಾಗಿ ಈ ಸಂದರ್ಭದಲ್ಲಿ ಚರ್ಚೆಯಾಗಲಿವೆ.

ಕಳೆದ ಮೂರು ವರ್ಷಗಳಲ್ಲಿ ಇದು ಮೂರನೇ ಸಚಿವರ ಮಟ್ಟದ (2+2) ಸಭೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ ಬಳಿಕ ಮೊದಲ ಸಭೆ 2018ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದಿತ್ತು. ನಂತರ, ವಾಷಿಂಗ್ಟನ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿತ್ತು.

‘ನಮ್ಮ ಸ್ನೇಹಿತರನ್ನು ಭೇಟಿಯಾಗುತ್ತಿರುವುದು ಸಂತಸ ಮೂಡಿಸಿದೆ. ಸ್ವತಂತ್ರ, ಬಲಿಷ್ಠ ಮತ್ತು ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳ ಜತೆ ಸಂಬಂಧ ಬೆಳೆಸುವ ಅವಕಾಶ ದೊರೆತಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕಲ್‌ ಪಾಂಪಿಯೊ ನವದೆಹಲಿಗೆ ತೆರಳುವ ಮುನ್ನ ತಿಳಿಸಿದ್ದಾರೆ.

ಪಾಂಪಿಯೊ ಜತೆ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌  ಇದ್ದಾರೆ. ಭಾರತದ ಪರ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಚೀನಾ ಜತೆಗೆ ನಡೆದ ಗಡಿ ಸಂಘರ್ಷದ ಬಳಿಕ ಈ ಸಭೆ ನಡೆಯುತ್ತಿರುವುದರಿಂದ ಮಹತ್ವ ಪಡೆದಿದೆ. ಜತೆಗೆ, ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನ ಸೇನೆಯನ್ನು ಹೆಚ್ಚಿಸಿದೆ. ಹೀಗಾಗಿ, ಈ ಎರಡು ವಿಷಯಗಳು ಚರ್ಚೆಯ ಸಂದರ್ಭದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಬಗ್ಗೆ ಮೆಚ್ಚುಗೆ: ಪ್ರಾದೇಶಿಕವಾಗಿ ಮತ್ತು ಜಾಗತಿಕ ಶಕ್ತಿಯಾಗಿ ಭಾರತ ಪ್ರಬಲವಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಸಚಿವರ ಮಟ್ಟದ ಮಾತುಕತೆ ಮುನ್ನ ಅಮೆರಿಕದ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿದೆ. ಉಭಯ ದೇಶಗಳು ಬಲಿಷ್ಠ ದ್ವಿಪಕ್ಷೀಯ ಸಂಬಂಧ ಹೊಂದಿವೆ. ಜಗತ್ತಿನ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಸದಾ ಎತ್ತಿ ಹಿಡಿದಿವೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು