ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ಭಾಗಶಃ ಸನ್ನದ್ಧತೆ: ಪುಟಿನ್ ಆದೇಶ

ಲಕ್ಷೋಪಾದಿಯಲ್ಲಿ ಯೋಧರನ್ನು ರಣಾಂಗಣಕ್ಕಿಳಿಸಲು ರಷ್ಯಾ ಕಾರ್ಯೋನ್ಮುಖ
Last Updated 21 ಸೆಪ್ಟೆಂಬರ್ 2022, 15:53 IST
ಅಕ್ಷರ ಗಾತ್ರ

ಮಾಸ್ಕೊ/ ಹಾರ್ಕಿವ್ :ಉಕ್ರೇನ್‌ ಮೇಲಿನ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಪಶ್ಚಿಮದ ರಾಷ್ಟ್ರಗಳ ಸಂಘಟಿತ ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಡಲು ತಕ್ಷಣವೇ ಜಾರಿಗೆ ಬರುವಂತೆ ದೇಶದ ಸೇನೆಯ ‘ಭಾಗಶಃ ಸಜ್ಜುಗೊಳಿಸುವಿಕೆ’ಗೆ ಆದೇಶ ನೀಡಲಾಗಿದ್ದು. ಇದರ ಅಗತ್ಯವಿತ್ತು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬುಧವಾರ ಘೋಷಿಸಿದ್ದಾರೆ.

ಉಕ್ರೇನ್‌ ಜತೆಗಿನ ಸಂಘರ್ಷದಲ್ಲಿ ರಷ್ಯಾ ಸೇನೆ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ಪುಟಿನ್‌ ಅವರ ಆದೇಶದಿಂದ ದೇಶದಲ್ಲಿ ಮೀಸಲಿರುವ3 ಲಕ್ಷ ಯೋಧರಲ್ಲಿ ಭಾಗಶಃ ಯೋಧರು ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಗೆ ಇಳಿಯಲಿದ್ದಾರೆ.ಎರಡನೇ ಮಹಾಯುದ್ಧದ ನಂತರರಷ್ಯಾಅಧ್ಯಕ್ಷರೊಬ್ಬರು ಇದೇ ಮೊದಲ ಬಾರಿಗೆ ಸೇನೆಯ ಭಾಗಶಃ ಸನ್ನದ್ಧತೆಗೆ ಆದೇಶ ನೀಡಿದ್ದಾರೆ. ಪುಟಿನ್‌ ಅವರು ಈ ಕಾರ್ಯಾದೇಶಕ್ಕೆ ಈಗಾಗಲೇ ಸಹಿ ಕೂಡ ಮಾಡಿದ್ದಾರೆ. ಇದರಿಂದ ಉಕ್ರೇನ್‌ನಲ್ಲಿ ಸಂಘರ್ಷ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಭಾಷಣ ಮಾಡಿದ ಅವರು, ‘ಅಮೆರಿಕ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ಅಣ್ವಸ್ತ್ರ ಬೆದರಿಕೆಮುಂದುವರಿಸಿದರೆ,ದೇಶದ ಸಮಗ್ರತೆ, ಭದ್ರತೆಗೆ ಬೆದರಿಕೆಯೊಡ್ಡಿದರೆ, ನಮ್ಮ ಜನರನ್ನು ರಕ್ಷಿಸಲು ತನ್ನಲ್ಲಿರುವ ಅಪಾರವಾದಎಲ್ಲ ಶಸ್ತ್ರಾಗಾರದ ಶಕ್ತಿಯೊಂದಿಗೆ ತಕ್ಕ ಪ್ರತ್ಯುತ್ತರವನ್ನೂ ನೀಡುತ್ತೇವೆ.ನಮ್ಮ ಬಳಿ ನಾನಾ ರೀತಿಯ ಶಸ್ತ್ರಾಸ್ತ್ರಗಳಿವೆ. ಇವುಗಳಲ್ಲಿ ಕೆಲವು ನ್ಯಾಟೊ ದೇಶಗಳು ಹೊಂದಿರುವ ಶಸ್ತ್ರಾಸ್ತ್ರಗಳಿಗಿಂತಲೂ ಹೆಚ್ಚು ಆಧುನಿಕವಾಗಿವೆ. ಇದು ಬೂಟಾಟಿಕೆಯಲ್ಲ’ ಎಂದು ಎಚ್ಚರಿಕೆ ನೀಡಿದರು.

ಲುಹಾನ್‌ಸ್ಕ್‌ ಮತ್ತು ಡೊನೆಟ್‌ಸ್ಕ್‌ ಗಣರಾಜ್ಯಗಳ ಜತೆಗೆ ರಷ್ಯಾ ನಿಯಂತ್ರಿತಕೆರ್ಸಾನ್‌ ಮತ್ತು ಝಪೊರೊಝಿಯಲ್ಲೂ ಇದೇ 23ರಿಂದ 27ರವರೆಗೆ ಜನಮತ ಗಣನೆ ನಡೆಸುವ ಘೋಷಣೆ ಹೊರಡಿಸಿದ ಮರು ದಿನವೇ ಪುಟಿನ್‌ ಈ ಎಚ್ಚರಿಕೆ ನೀಡಿದ್ದಾರೆ.

3 ಲಕ್ಷ ಯೋಧರ ಸೇರ್ಪಡೆ

ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆ ಸಂದರ್ಭ 3 ಲಕ್ಷ ಮೀಸಲು ಯೋಧರನ್ನು ಸೇವೆಗೆ ಸೇರಿಸಿಕೊಳ್ಳಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಹೇಳಿದರು.

‘ಉಕ್ರೇನ್‌ನಲ್ಲಿನ ಸೇನಾ ಕಾರ್ಯಾಚರಣೆಯಲ್ಲಿ ಒಟ್ಟು 5,937 ಯೋಧರು ಸಾವನ್ನಪ್ಪಿದ್ದಾರೆ. ಉಕ್ರೇನ್‌ ಕಡೆಯಲ್ಲಿ ಸಾವುನೋವು ಹತ್ತು ಪಟ್ಟು ಹೆಚ್ಚಿದೆ. ಉಕ್ರೇನಿನ 61,207 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ’ ಎಂದು ಶೋಯಿಗು ಬಹಿರಂಗಪಡಿಸಿದರು.

ಸೇನಾ ಕಾರ್ಯಾಚರಣೆಯಲ್ಲಿರಷ್ಯಾ ತನಗೆ ಆಗಿರುವ ನಷ್ಟದ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿದೆ.

*****

ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶ ಸ್ವತಂತ್ರಗೊಳಿಸುವುದು ನನ್ನ ಗುರಿ. ರಷ್ಯಾ ನಿಯಂತ್ರಿತ ಪ್ರದೇಶಗಳಲ್ಲಿ ಹೆಚ್ಚಿನವರು ಕೀವ್‌ ಆಡಳಿತ ಬಯಸುವುದಿಲ್ಲ

–ವ್ಲಾಡಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ

ಮೀಸಲು ಪಡೆಯನ್ನು ಒಳಗೊಳ್ಳುವ ಸೇನೆಯ ಭಾಗಶಃ ಸಜ್ಜುಗೊಳಿಸುವ ಪುಟಿನ್ ಆದೇಶವು ಉಕ್ರೇನ್‌ ಮೇಲಿನ ಆಕ್ರಮಣ ವಿಫಲವಾಗಿರುವುದನ್ನು ತೋರಿಸುತ್ತದೆ

–ಬೆನ್‌ ವಾಲೆಸ್‌,ಬ್ರಿಟನ್‌ ರಕ್ಷಣಾ ಸಚಿವ

ಪ್ರಮುಖಾಂಶಗಳು

* ಪುಟಿನ್‌ ಆದೇಶ ನೀಡಿದ ಬೆನ್ನಲ್ಲೇ ಉಕ್ರೇನ್‌ನ ಹಾರ್ಕಿವ್‌ ನಗರದ ವಸತಿ ಕಟ್ಟಡಗಳಿಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿಗಳು

* ಯುದ್ಧಪೀಡಿತ ಹಾರ್ಕಿವ್‌ ನಗರದಲ್ಲಿ ಬುಧವಾರ ಕ್ಷಿಪಣಿಗಳು ಮತ್ತು ಬಾಂಬ್‌ ಸ್ಫೋಟಕ್ಕೆ ಅಕ್ಷರಶಃ ಬೆಚ್ಚಿಬಿದ್ದ ನಾಗರಿಕರು

* ಪುಟಿನ್‌ ಆದೇಶ ಮೊದಲೇ ಊಹಿಸಲಾಗಿತ್ತು. ಯುದ್ಧದಲ್ಲಿ ರಷ್ಯಾ ಯೋಜನೆ ಫಲಿಸಿಲ್ಲ– ಉಕ್ರೇನ್‌ ಅಧ್ಯಕ್ಷರ ಸಲಹೆಗಾರ ಮಿಖಾಯಿಲೊ ಪೊಡೊಲಿಯಾಕ್‌

* ಪುಟಿನ್‌ ಆದೇಶ ಹೊರಬೀಳುತ್ತಿದ್ದಂತೆ ದೇಶದಿಂದ ನಿರ್ಗಮಿಸಲು ಏಕಮುಖ ಪ್ರಯಾಣದ ವಿಮಾನ ಟಿಕೆಟ್‌ ಕಾಯ್ದಿರಿಸಲು ಮುಗಿಬಿದ್ದರಷ್ಯಾ ಪ್ರಜೆಗಳು

* ದೇಶದ ಗಡಿಗಳನ್ನು ಶೀಘ್ರವೇ ಮುಚ್ಚುವ ಆತಂಕದಲ್ಲಿ ಜನರು ದೇಶ ತೊರೆಯುತ್ತಿದ್ದು, ಬಹುತೇಕ ವಿಮಾನಗಳು ಭರ್ತಿ

* ವಿಮಾನ ಪ್ರಯಾಣ ಟಿಕೆಟ್‌ ದರ ದಿಢೀರನೇ ರಾಕೆಟ್‌ ವೇಗದಲ್ಲಿ ಗಗನಕ್ಕೇರಿದೆ

* ಏರ್ ಸರ್ಬಿಯಾದ ಮಾಸ್ಕೊ– ಬೆಲ್ಗ್ರೇಡ್‌ ನಡುವಿನವಿಮಾನಗಳ ಟಿಕೆಟ್ ಮುಂದಿನ ಹಲವು ದಿನಗಳವರೆಗೆ ಮುಂಗಡ ಮಾರಾಟ

* ಪುಟಿನ್ ಆಪ್ತಮಿತ್ರ ರಷ್ಯಾದ ಉದ್ಯಮಿ ಅಲಿಶರ್ ಉಸ್ಮಾನೋವ್ ಜರ್ಮನಿಯಾದ್ಯಂತ ಹೊಂದಿದ್ದಎರಡು ಡಜನ್‌ ಆಸ್ತಿಗಳು ಪೊಲೀಸರಿಂದ ಮುಟ್ಟುಗೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT