ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಮುಸ್ಲಿಮರೆಂಬ ಕಾರಣಕ್ಕೆ ಒಂದೇ ಕುಟುಂಬದ ನಾಲ್ವರ ಕೊಲೆ

Last Updated 8 ಜೂನ್ 2021, 7:06 IST
ಅಕ್ಷರ ಗಾತ್ರ

ಲಂಡನ್‌ (ಕೆನಡಾ): ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಕುಟುಂಬದ ನಾಲ್ವರು ಸದಸ್ಯರ ಮೇಲೆ ಪಿಕ್-ಅಪ್ ಟ್ರಕ್ ಹರಿಸಿ ಕೊಂದಿದ್ದಾನೆ. ಪೂರ್ವನಿಯೋಜಿತವಾದ ಈ ಕೃತ್ಯವನ್ನು ‘ದ್ವೇಷ’ಭಾವದಿಂದ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘‌ರಕ್ಷಾಕವಚದಂಥ ಉಡುಪು ಧರಿಸಿದ್ದ 20 ವರ್ಷದ ಆರೋಪಿ ಭಾನುವಾರ ಸಂಜೆ ಈ ಕೃತ್ಯವೆಸಗಿದ್ದಾನೆ. ಕೊಲೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಒಂಟಾರಿಯೊದ ಲಂಡನ್‌ ನಗರದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಮಾಲ್‌ನಲ್ಲಿ ಸೆರೆಯಾಗಿದ್ದಾನೆ,’ ಎಂದು ಡಿಟೆಕ್ಟಿವ್ ಅಧೀಕ್ಷಕ ಪಾಲ್ ವೈಟ್‌ ತಿಳಿಸಿದ್ದಾರೆ.

ಮೃತರ ಹೆಸರುಗಳನ್ನು ಬಿಡುಗಡೆ ಮಾಡಲಾಗಿಲ್ಲ. ಆದರೆ ಅವರಲ್ಲಿ 74 ವರ್ಷದ ಮಹಿಳೆ, 46 ವರ್ಷದ ವ್ಯಕ್ತಿ, 44 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕಿ ಸೇರಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಇದು ದ್ವೇಷದಿಂದ ಪ್ರೇರಿತವಾದ ಯೋಜಿತ, ಪೂರ್ವನಿರ್ಧರಿತ ಕೃತ್ಯ ಎಂಬುದಕ್ಕೆ ಪುರಾವೆಗಳಿವೆ. ಮುಸ್ಲಿಮರಾಗಿದ್ದರೆಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿರುವ ಕೆನಡಾದ ಸಾರ್ವಜನಿಕ ಸುರಕ್ಷತೆ ಇಲಾಖೆ ಸಚಿವ ಬಿಲ್ ಬ್ಲೇರ್ ‘ಇಸ್ಲಾಮೋಫೋಬಿಯಾದ ಭಯಾನಕ ಕೃತ್ಯವಿದು. ನಂಬುಗೆಗಳ ಕಾರಣಕ್ಕಾಗಿ ಕುಟುಂಬವನ್ನು ಗುರಿಯಾಗಿಸಲಾಗಿತ್ತು. ಮುಸ್ಲಿಮರು ಎಂಬ ದ್ವೇಷದಿಂದ ದಾಳಿಕೋರ ಈ ಕೃತ್ಯ ಎಸಗಿದ್ದಾನೆ‘ ಎಂದು ಹೇಳಿದ್ದಾರೆ.

‘ಇದು ಮುಸ್ಲಿಮರ ವಿರುದ್ಧದ, ಲಂಡನ್ನರ ವಿರುದ್ಧದ ಹೇಳತೀರದ ದ್ವೇಷದಿಂದ ಪ್ರೇರಿತವಾದ ಸಾಮೂಹಿಕ ಹತ್ಯೆ’ ಎಂದು ಲಂಡನ್‌ ನಗರದ ಮೇಯರ್‌ ಎಡ್‌ ಹೋಲ್ಡರ್ ಅಭಿಪ್ರಾಯಪಟ್ಟಿದ್ದಾರೆ.

ಆರೋಪಿ ನಾಥನಿಯಲ್‌ ವೆಲ್ಟ್‌ಮನ್‌ ವಿರುದ್ಧ ಕೊಲೆ, ಕೊಲೆ ಪ್ರಯತ್ನ ಸೇರಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಬಹುದೇ ಎಂಬುದರ ಕುರಿತು ಸ್ಥಳೀಯ ಪೊಲೀಸರು, ಕೇಂದ್ರ ಪೊಲೀಸ್‌ ಆಧಿಕಾರಿಗಳು ಮತ್ತು ಅಟಾರ್ನಿ ಜನರಲ್‌ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ,‘ ಎಂದು ಡಿಟೆಕ್ಟಿವ್ ಅಧೀಕ್ಷಕ ಪಾಲ್ ವೇಟ್‌ ತಿಳಿಸಿದ್ದಾರೆ.

ಇಸ್ಲಾಮೋಫೋಬಿಯಾಕ್ಕೆ ಕೆನಡಾದಲ್ಲಿ ಸ್ಥಾನವಿಲ್ಲ

ಘಟನೆ ಸಂಬಂಧ ಟ್ವೀಟ್‌ ಮಾಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಭಯಭೀತರಾದವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ನಿನ್ನೆಯ ದ್ವೇಷಪೂರಿತ ಕೃತ್ಯದಿಂದ ಭಯಭೀತರಾದ ನಮ್ಮ ಪ್ರೀತಿಪಾತ್ರರೇ... ನಾವು ನಿಮ್ಮೊಂದಿಗೆ ಇದ್ದೇವೆ,’ ಎಂದು ಹೇಳಿದ್ದಾರೆ.

‘ಲಂಡನ್‌ ನಗರಕ್ಕಾಗಲಿ ಅಥವಾ ಇಡೀ ದೇಶಕ್ಕಾಗಲಿ... ಮುಸ್ಲಿಮರಿಗೆ ತಿಳಿಸುವುದೇನೆಂದರೆ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಇಸ್ಲಾಮೋಫೋಬಿಯಾಕ್ಕೆ ಇಲ್ಲಿ ಸ್ಥಾನವಿಲ್ಲ. ಈ ದ್ವೇಷವು ನಿಕೃಷ್ಟವಾದದ್ದು. ಇಂಥ ಕೃತ್ಯಗಳು ನಿಲ್ಲಬೇಕು,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT