ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕಿ ವಿರುದ್ಧ ಹೊಸ ಆರೋಪ ಹೊರಿಸಿದ ಮಿಲಿಟರಿ ಆಡಳಿತ

ಮ್ಯಾನ್ಮಾರ್‌: ಮತ್ತೆ 10 ಜನರನ್ನು ಕೊಂದ ಸೇನೆ
Last Updated 12 ಮಾರ್ಚ್ 2021, 7:33 IST
ಅಕ್ಷರ ಗಾತ್ರ

ಮ್ಯಾಂಡಲೆ (ಮ್ಯಾನ್ಮಾರ್‌): ಮಿಲಿಟರಿ ದಂಗೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಗುರುವಾರ 10 ಜನರನ್ನು ಮ್ಯಾನ್ಮಾರ್‌ನ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ಇನ್ನೊಂದೆಡೆ, ಅಧಿಕಾರದಿಂದ ಪದಚ್ಯುತಗೊಳಿಸಿರುವ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಮಿಲಿಟರಿ ಆಡಳಿತ ಹೊಸ ಆರೋಪಗಳನ್ನು ಹೊರಿಸಿದೆ.

2017-18ರಲ್ಲಿ ಸೂಕಿ ಅಕ್ರಮವಾಗಿ 6,00,000 ಅಮೆರಿಕನ್‌ ಡಾಲರ್‌ ಹಾಗೂ ಚಿನ್ನದ ಗಟ್ಟಿಯನ್ನು ರಾಜಕೀಯ ಮಿತ್ರರಿಂದ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಹೊಸದಾಗಿ ಹೊರಿಸಲಾಗಿದೆ.

ಮಿಲಿಟರಿ ವಕ್ತಾರ ಜನರಲ್ ಜಾವ್‌ ಮಿನ್ ತುನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾಂಗೊನ್ ವಿಭಾಗದ ಮಾಜಿ ಮುಖ್ಯಮಂತ್ರಿ ಫಿಯೊ ಮಿನ್ ಥೀನ್ ಅವರು ಹಣ ಮತ್ತು ಚಿನ್ನವನ್ನು ಸೂಕಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಅವರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.

ಸ್ಥಳೀಯ ಪತ್ರಿಕಾ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ಮಾಡಿರುವ ಪೋಸ್ಟ್‌ಗಳ ಪ್ರಕಾರ, ಮಿಲಿಟರಿ ಪಡೆಗಳು ಮೈಯಿಂಗ್‌ನಲ್ಲಿ ಆರು ಜನರನ್ನು ಕೊಂದಿವೆ. ಯಾಂಗೂನ್‌,ಮ್ಯಾಂಡಲೆ, ಬಾಗೊ ಮತ್ತು ಟೌಂಗೂಗಳಲ್ಲಿ ತಲಾ ಒಬ್ಬರನ್ನು ಕೊಂದಿವೆ. ಸತ್ತವರ ಶವಗಳೆಂದು ಹೇಳಲಾದ ಭಾವಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಬುಧವಾರವಷ್ಟೇ ಮ್ಯಾನ್ಮಾರ್‌ ದಂಗೆಯನ್ನು ಹಿಮ್ಮೆಟ್ಟಿಸಲು ಸರ್ವಾನುಮತದಿಂದ ಕರೆ ನೀಡಿತ್ತು. ಅಲ್ಲದೆ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ವಿರುದ್ಧ ಸೇನೆಯ ಹಿಂಸಾಚಾರವನ್ನು ಬಲವಾಗಿ ಖಂಡಿಸಿತ್ತು. ಅಲ್ಲದೆ, ಮಿಲಿಟರಿ ಆಡಳಿತ ಅತ್ಯಂತ ಸಂಯಮದಿಂದ ನಡೆದುಕೊಳ್ಳಬೇಕು ಎಂದೂ ಕರೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT