ನ್ಯೂಜಿಲ್ಯಾಂಡ್: ಒಂದೇ ಕುಟುಂಬದ ಮೂವರಲ್ಲಿ ಸೋಂಕು

ವೆಲ್ಲಿಂಗ್ಟನ್: ‘ನ್ಯೂಜಿಲ್ಯಾಂಡ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ಒಂದೇ ಕುಟುಂಬದಲ್ಲಿ ಮೂರು ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ ಸೋಂಕಿನ ಮೂಲ ಇನ್ನೂ ತಿಳಿದಿಲ್ಲ’ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದರು.
ನ್ಯೂಜಿಲ್ಯಾಂಡ್‌ನ ಆಕ್ಲೆಂಡ್‌ನ ಕುಟುಂಬವೊಂದರಲ್ಲಿ ತಂದೆ, ತಾಯಿ ಮತ್ತು ಮಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಜೆಸಿಂಡ ಆರ್ಡರ್ನ್ ಅವರು ಆಕ್ಲೆಂಡ್ ಭೇಟಿಯನ್ನು ರದ್ದುಗೊಳಿಸಿ, ವೆಲ್ಲಿಂಗ್ಟನ್‌ಗೆ ವಾಪಸಾಗಿದ್ದಾರೆ.
‘ಈ ಮೂವರಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ. ಇಲ್ಲಿನ ವಿಮಾನ ನಿಲ್ದಾಣವೊಂದರಲ್ಲಿ ತಾಯಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಹುಶಃ ಪ್ರಯಣಿಕರಿಂದ ಆಕೆಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ಪ್ರೌಢಶಾಲೆಯನ್ನು ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ಮುಚ್ಚಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ನಾವು ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಈ ಹಿಂದೆ ಉತ್ತಮ ಫಲಿತಾಂಶ ನೀಡಿದ ವ್ಯವಸ್ಥೆಯನ್ನೇ ನಾವು ಮತ್ತೊಮ್ಮೆ ಪಾಲಿಸುತ್ತಿದ್ದೇವೆ’ ಎಂದು ಕೋವಿಡ್ ಸ್ಪಂದನಾ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ಹೇಳಿದರು.
ನ್ಯೂಜಿಲ್ಯಾಂಡ್ ಸರ್ಕಾರವು ಕೊರೊನಾ ಸೋಂಕಿನ ಸಮುದಾಯ ಪ್ರಸರಣವನ್ನು ತಡೆಯುವಲ್ಲಿ ಸಫಲವಾಗಿದೆ. ಆದರೆ ನ್ಯೂಜಿಲ್ಯಾಂಡ್‌ಗೆ ಮರಳುತ್ತಿರುವ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ವಿದೇಶದಿಂದ ನ್ಯೂಜಿಲ್ಯಾಂಡ್‌ಗೆ ಆಗಮಿಸುವವರಿಗೆ ಎರಡು ವಾರಗಳ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಲಾಗಿದೆ.
50 ಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ 2,300 ಕೋವಿಡ್ ಪ್ರಕರಣಗಳಷ್ಟೇ ವರದಿಯಾಗಿದ್ದು, 25 ಮಂದಿ ಮೃತಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.