ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ತೀವ್ರತೆ ಕಡಿಮೆ ಎಂಬುದಕ್ಕೆ ಪುರಾವೆ ಇಲ್ಲ: ಅಧ್ಯಯನ ವರದಿ

Last Updated 20 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಲಂಡನ್: ‘ಡೆಲ್ಟಾ ತಳಿಯಿಂದ ತಗುಲಿದ ಕೋವಿಡ್‌ನ ತೀವ್ರತೆಗಿಂತ,‌‌‌‍ಓಮೈಕ್ರಾನ್‌ ರೂಪಾಂತರ ತಳಿಯಿಂದ ತಗುಲಿದ ಕೋವಿಡ್‌ನ ತೀವ್ರತೆಯು ಕಡಿಮೆ ಇರುತ್ತದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳು ಇಲ್ಲ’ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ನಡೆಸಿದ ಅಧ್ಯಯನ ವರದಿಯು ಹೇಳಿದೆ.

ನವೆಂಬರ್ 29ರಿಂದ ಡಿಸೆಂಬರ್‌ 11ರ ನಡುವೆ ಬ್ರಿಟನ್‌ನಲ್ಲಿ ಪತ್ತೆಯಾದ ಕೋವಿಡ್‌ ಮತ್ತು ಓಮೈಕ್ರಾನ್‌ ಕೋವಿಡ್‌ ಪ್ರಕರಣಗಳ ಅಧ್ಯಯನ ನಡೆಸಲಾಗಿತ್ತು. ‘ಡೆಲ್ಟಾ ತಳಿಯಿಂದ ಉಂಟಾಗುವ ಮರುಸೋಂಕಿನ ಪ್ರಮಾಣಕ್ಕಿಂತ, ಓಮೈಕ್ರಾನ್‌ ತಳಿಯ ಮರುಸೋಂಕು ಪ್ರಮಾಣ 5.4 ಪಟ್ಟು ಹೆಚ್ಚು. ಜತೆಗೆ ಈ ಹಿಂದೆ ಸೋಂಕಿಗೆ ಒಳಗಾಗಿದ್ದವರಿಗೆ ಮತ್ತು ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡಿದ್ದವರಿಗೆ ಓಮೈಕ್ರಾನ್‌ನಿಂದ ರಕ್ಷಣೆ ಸಿಗುವ ಸಾಧ್ಯತೆ ಶೇ 19ರಷ್ಟು ಮಾತ್ರ. ಹೀಗಾಗಿ ಓಮೈಕ್ರಾನ್‌ ವ್ಯಾಪಕವಾಗಿ ಹರಡುವ ಅಪಾಯವಿದೆ’ ಎಂದು ಅಧ್ಯಯನ ವರದಿಯು ಹೇಳಿದೆ.

‘ಓಮೈಕ್ರಾನ್‌ನಿಂದ ತಗುಲಿದ ಕೋವಿಡ್‌ನ ತೀವ್ರತೆ ಈಗ ಕಡಿಮೆ ಇರುವಂತೆ ಭಾಸವಾಗುತ್ತಿದೆ. ಓಮೈಕ್ರಾನ್‌ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಈಗ ಕಡಿಮೆ ಇದೆ. ಆದರೆ ಮುಂದಿನ ದಿನಗಳಲ್ಲಿ ಇದು ಬದಲಾಗುವ ಅಪಾಯ ಇದೆ’ ಎಂದು ವರದಿಯು ಹೇಳಿದೆ.

‘ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಅವಧಿಯಲ್ಲಿ ಬ್ರಿಟನ್‌ನಲ್ಲಿ ಪತ್ತೆಯಾದ ಕೋವಿಡ್‌ ಪ್ರಕರಣಗಳಲ್ಲಿ ಓಮೈಕ್ರಾನ್‌ ಪ್ರಕರಣಗಳ ಪ್ರಮಾಣ ಗಣನೀಯವಾಗಿಯೇ ಇತ್ತು. ಆದರೆ, ಪ್ರತಿ ಎರಡು ದಿನಕ್ಕೊಮ್ಮೆ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಓಮೈಕ್ರಾನ್‌ನ ಮರುಸೋಂಕು (ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆ) ಸಂಖ್ಯೆಯು 3ರಷ್ಟಿದೆ. ಇದು ಅಪಾಯಕಾರಿ’ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಒಂದೇ ದಿನ 12,133 ಪ್ರಕರಣಗಳು: ಕೋವಿಡ್‌ ಪ್ರಕರಣಗಳ ಏರಿಕೆ ಮತ್ತು ಓಮೈಕ್ರಾನ್‌ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಮತ್ತೆ ಲಾಕ್‌ಡೌನ್‌ ಹೇರುವ ಬಗ್ಗೆ ಬ್ರಿಟನ್ ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿ ಓಮೈಕ್ರಾನ್‌ ಸೋಂಕಿನ 12,133 ಪ್ರಕರಣಗಳು ಸೋಮವಾರ ದೃಢಪಟ್ಟಿವೆ.

ಇದು ಬ್ರಿಟನ್‌ನಲ್ಲಿ ಒಂದು ದಿನ ಪತ್ತೆಯಾದ ಓಮೈಕ್ರಾನ್‌ ಗರಿಷ್ಠ ಪ್ರಕರಣಗಳು.

‘ಲಸಿಕೆಗಳನ್ನು ಮಾರ್ಪಡಿಸಬಹುದು’
ಪುಣೆ (ಪಿಟಿಐ):
‘ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಗಳ ವಿರುದ್ಧ ಕೆಲಸ ಮಾಡುವ ರೀತಿಯಲ್ಲಿ, ಈಗ ಬಳಕೆಯಲ್ಲಿರುವ ಲಸಿಕೆಗಳನ್ನು ಮಾರ್ಪಡಿಸಬಹುದು’ ಎಂದು ದೆಹಲಿ ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

‘ಓಮೈಕ್ರಾನ್‌ ಹರಡುತ್ತಿರುವ ಬಗೆಯನ್ನು ಗಮನಿಸಿದರೆ, ಮುಂದಿನ ಕೆಲವು ವಾರಗಳು ಅತ್ಯಂತ ಮಹತ್ವದ್ದು. ಇದು ವ್ಯಾಪಕವಾಗಿ ಹರಡುತ್ತಿದೆಯಾದರೂ, ಕೋವಿಡ್‌ ಲಕ್ಷಣ ಮತ್ತು ರೋಗಗಳ ತೀವ್ರತೆ ಕಡಿಮೆ ಇದೆ ಎಂಬುದೇ ಒಂದು ಆಶಾಕಿರಣ.ಈಗ ಬಳಕೆಯಲ್ಲಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ಆದರೆ ಹೊಸ ರೂಪಾಂತರ ತಳಿಗಳು ಬಂದಹಾಗೆ, ಲಸಿಕೆಯಿಂದ ದೊರೆತಿರುವ ರೋಗನಿರೋಧಕ ಶಕ್ತಿ ಕುಂದುತ್ತದೆ. ಆದರೆ ಈಗ ಬಳಕೆಯಲ್ಲಿರುವ ಲಸಿಕೆಗಳನ್ನು ಮಾರ್ಪಡಿಸಬಹುದು ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

* ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ನೀಡುವ ಲಸಿಕೆಯನ್ನು ಬೂಸ್ಟರ್‌ ಡೋಸ್‌ನಂತೆ ಬಳಸುವ ಉದ್ದೇಶದಿಂದ 3ನೇ ಹಂತದ ಕ್ರಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಿ ಎಂದು ಕಂಪನಿಯು ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಿದೆ

* ಓಮೈಕ್ರಾನ್ ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ತಜ್ಞರ ಸಮಿತಿಯು ಜರ್ಮನ್ ಸರ್ಕಾರಕ್ಕೆ ಸಲಹೆ ನೀಡಿದೆ.

*
ಓಮೈಕ್ರಾನ್‌ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಡೆಗಣಿಸಿದರೆ, ಅದು ಮತ್ತಷ್ಟು ವೇಗವಾಗಿ ಹರಡುವ ಅಪಾಯವಿದೆ.
–ಡಾ.ಡಾ.ರಣದೀಪ್‌ ಗುಲೇರಿಯಾ, ದೆಹಲಿ ಏಮ್ಸ್ ನಿರ್ದೇಶಕ

*
ಭಾರತದಲ್ಲಿ ಓಮೈಕ್ರಾನ್‌ ಹರಡುವಿಕೆ ತೀವ್ರ, ಲಸಿಕೆಯ ಪ್ರತಿರೋಧವನ್ನು ತಪ್ಪಿಸುತ್ತದೆ ಮತ್ತು ರೋಗದ ತೀವ್ರತೆ ಹೆಚ್ಚು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ
–ಭಾರತೀಯ ಸಾರ್ಸ್‌ಕೋವ್‌–2 ಜಿನೋಮಿಕ್ಸ್ ಕನ್ಸೋರ್ಷಿಯಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT