ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಎರಡನೇ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

Last Updated 5 ಮಾರ್ಚ್ 2022, 2:46 IST
ಅಕ್ಷರ ಗಾತ್ರ

ಸೋಲ್‌ (ದಕ್ಷಿಣ ಕೊರಿಯಾ): ಉತ್ತರ ಕೊರಿಯಾ ಶನಿವಾರ ತನ್ನ ಪೂರ್ವ ಕರಾವಳಿಯಲ್ಲಿ ಸಮುದ್ರದ ಕಡೆಗೆ ಖಂಡಾಂತರ ಕ್ಷಿಪಣಿಯೊಂದನ್ನು ಉಡಾಯಿಸಿದೆ. ವಾರ ಕಳೆಯುವುದರೊಳಗಾಗಿ ಉತ್ತರ ಕೊರಿಯಾ ನಡೆಸಿದ ಎರಡನೇ ಕ್ಷಿಪಣಿ ಪ್ರಯೋಗವಿದು ಎಂದು ದಕ್ಷಿಣ ಕೊರಿಯಾದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನಾನ್‌ನಿಂದ ಬೆಳಿಗ್ಗೆ 8:48ಕ್ಕೆ ಕ್ಷಿಪಣಿಯನ್ನು ಉಡಾಯಿಸಲಾಗಿದೆ. ಉಡಾವಣೆಗೊಂಡ ರಾಕೆಟ್‌ ಬಗ್ಗೆ ದಕ್ಷಿಣ ಕೊರಿಯಾದ ರಕ್ಷಣಾ ಅಧಿಕಾರಿಗಳು ಹೆಚ್ಚಿನ ವಿವರ ಒದಗಿಸಿಲ್ಲ. ಉತ್ತರ ಕೊರಿಯಾ ಯಾವ ರೀತಿಯ ಕ್ಷಿಪಣಿಯನ್ನು ಹಾರಿಸಿದೆ ಎಂಬುದನ್ನು ನಿರ್ಧರಿಸಲು ದತ್ತಾಂಶ ಸಂಗ್ರಹಿಸುತ್ತಿರುವುದಾಗಿ ದಕ್ಷಿಣ ಕೊರಿಯಾ ತಿಳಿಸಿದೆ. ಈ ಬಗ್ಗೆ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿಮಾಡಿದೆ.

ಉತ್ತರ ಕೊರಿಯಾ ಕೊನೆಯದಾಗಿ ಭಾನುವಾರವಷ್ಟೇ ಕ್ಷಿಪಣಿಯೊಂದರ ಪರೀಕ್ಷೆ ನಡೆಸಿತ್ತು. ಅದು ಖಂಡಾಂತರ ಕ್ಷಿಪಣಿಯಾಗಿತ್ತು ಎಂದು ಅಮೆರಿಕದ ಮತ್ತು ದಕ್ಷಿಣ ಕೊರಿಯಾ ಅಭಿಪ್ರಾಯಪಟ್ಟಿದ್ದವು. ಆದರೆ, ಇದನ್ನು ನಿರಾಕರಿಸಿದ್ದ ಉತ್ತರ ಕೊರಿಯಾ ಮಿಲಿಟರಿ ಉದ್ದೇಶದ ವಿಚಕ್ಷಣ ಉಪಗ್ರಹದ ಉಡಾವಣೆಗಾಗಿ ಪ್ರಯೋಗ ನಡೆಸಿದ್ದಾಗಿ ಹೇಳಿತ್ತು. ಅಲ್ಲದೆ, ಭೂಮಿಯ ವೈಮಾನಿಕ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದ ಉತ್ತರ ಕೊರಿಯಾ, ರಾಕೆಟ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾ ಆ ಚಿತ್ರವನ್ನು ತೆಗೆದಿದ್ದಾಗಿ ತಿಳಿಸಿತ್ತು.

ಮಿಲಿಟರಿ ವಿಚಕ್ಷಣ ಉಪಗ್ರಹಗಳನ್ನು ಒಳಗೊಂಡಂತೆ ತಾನು ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳ ವಿವರವಾದ ಪಟ್ಟಿಯನ್ನು ಉತ್ತರ ಕೊರಿಯಾ ಜನವರಿ 2021ರ ‘ವರ್ಕರ್ಸ್ ಪಾರ್ಟಿ’ ಸಭೆಯಲ್ಲಿ ಅನಾವರಣಗೊಳಿಸಿತ್ತು. ಆದರೆ, ಕಕ್ಷೆಗೆ ಉಪಗ್ರಹವನ್ನು ಕಳುಹಿಸದಂತೆ ಮತ್ತು ರಾಕೆಟ್‌ಗಳನ್ನು ಉಡಾವಣೆ ಮಾಡದಂತೆ ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧ ಹೇರಿದೆ. ದೀರ್ಘ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ರಾಕೆಟ್‌ಗಳನ್ನು ಬಳಸಿಕೊಳ್ಳುವ ಆತಂಕ ವಿಶ್ವಸಂಸ್ಥೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT