ಸೋಮವಾರ, ಡಿಸೆಂಬರ್ 5, 2022
19 °C

ಇಮ್ರಾನ್‌ ಹತ್ಯೆ ಯತ್ನ: ಹಿರಿಯ ಅಧಿಕಾರಿ ವಿರುದ್ಧದ ಆರೋಪ ಹೊಣೆಗೇಡಿತನದ್ದೆಂದ ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ಮೇಲಿನ ಹತ್ಯೆ ಯತ್ನದ ಪಿತೂರಿಯ ಹಿಂದೆ ಹಿರಿಯ ಅಧಿಕಾರಿ ಇದ್ದಾರೆ ಎಂಬ ಆರೋಪವನ್ನು ಪಾಕಿಸ್ತಾನ ಸೇನೆ ತಳ್ಳಿ ಹಾಕಿದೆ. ಇದೊಂದು ಆಧಾರ ರಹಿತ ಮತ್ತು ಹೊಣೆಗೇಡಿತನದ ಹೇಳಿಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ. ಇಂತಹ ಆರೋಪ ಸ್ವೀಕಾರ್ಹವಲ್ಲ ಎಂದಿದೆ.

ಹತ್ಯೆ ಯತ್ನವು ಪೂರ್ವ ಯೋಜಿತ ಕೃತ್ಯವಾಗಿದೆ. ಈ ಪಿತೂರಿಯ ಹಿಂದೆ ಪಾಕ್‌ ಸೇನೆಯ ಹಿರಿಯ ಅಧಿಕಾರಿಯ ಪಾತ್ರವಿದೆ. ಸರ್ಕಾರ ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕು. ಸರ್ಕಾರಿ ಸಂಸ್ಥೆಯನ್ನು ತಮ್ಮ ವಿರುದ್ಧದ ಹಗೆತನಕ್ಕೆ ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಮ್ರಾನ್‌ ಖಾನ್‍‌ ಒತ್ತಾಯಿಸಿದ್ದರು. ಗುಂಡೇಟಿನಿಂದ ಗಾಯಗೊಂಡ ಬಳಿಕ ಅದೇ ರಾತ್ರಿ ಈ ಹೇಳಿಕೆ ನೀಡಿದ್ದರು.

2011ರಲ್ಲಿ ಧಾರ್ಮಿಕ ಉಗ್ರರು ಮಾಜಿ ಪಂಜಾಬ್‌ ಗವರ್ನರ್‌ ಸಲ್ಮಾನ್‌ ತಾಸೀರ್‌ ಅವರನ್ನು ಹತ್ಯೆಗೈದಂತೆ ತಮ್ಮನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರ ಹಿಂದೆ ಪ್ರಧಾನಿ ಶೆಹಬಾಜ್‌ ಶರೀಫ್‌, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಮೇಜರ್‌ ಜೆನರಲ್‌ ಫೈಸಲ್‌ ನಾಸೀರ್‌ ಇದ್ದಾರೆ ಎಂದು ಇಮ್ರಾನ್‌ ಖಾನ್‌ ಆರೋಪಿಸಿದ್ದರು.

'ನನ್ನನ್ನು ಹತ್ಯೆ ಮಾಡಲು ನಾಲ್ವರು ಯೋಜನೆ ರೂಪಿಸಿದ್ದಾರೆ. ನಾನು ಇದರ ಬಗ್ಗೆ ವಿಡಿಯೊ ಮಾಡಿದ್ದೇನೆ. ಅದನ್ನು ವಿದೇಶದಲ್ಲಿ ಗುಪ್ತವಾಗಿ ಇಟ್ಟಿದ್ದೇನೆ. ಒಂದು ವೇಳೆ ನನಗೇನಾದರೂ ಆಗಬಾರದ್ದು ಆದರೆ ಆ ವಿಡಿಯೊ ಬಿಡುಗಡೆಯಾಗಲಿದೆ' ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಪಾಕಿಸ್ತಾನ ಸೇನೆಯನ್ನು ಮತ್ತು ಯೋಧರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ. ಈ ವಿಚಾರವಾಗಿ ಪಾಕಿಸ್ತಾನ ಸರ್ಕಾರ ತನಿಖೆ ನಡೆಸಬೇಕು. ಯಾವುದೇ ಆಧಾರವಿಲ್ಲದೆ ನಮ್ಮ ಸಂಸ್ಥೆ ವಿರುದ್ಧ ತಪ್ಪು ಆರೋಪ ಹೋರಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು