ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಸ್ಥಿರತೆಯ ಗಾಳಿ: ಖಾನ್ ಹುರುಪಿಗೆ ಕಾರಣವೇನು?

Last Updated 1 ಆಗಸ್ಟ್ 2022, 5:32 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ರಾಜಕೀಯ ಅಸ್ಥಿರತೆಯ ತೊಟ್ಟಿಲನ್ನು ಸದಾ ತೂಗುತ್ತಲೇ ಇರುವ ಪಾಕಿಸ್ತಾನ ಮತ್ತೊಂದು ಸುತ್ತಿನ ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಕಳೆದ ಜುಲೈ 18 ರಂದು ಪ್ರಕಟಗೊಂಡ ಪಂಜಾಬ್ ಪ್ರಾಂತ್ಯದ ವಿಧಾನಸಭಾ ಉಪಚುನಾವಣೆಯಲ್ಲಿಮಾಜಿ ಪ್ರಧಾನಿ ಇಮ್ರಾನ್ ಖಾನ್‌ ನೇತೃತ್ವದಪಾಕಿಸ್ತಾನ್‌ ತೆಹ್ರಿಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷವು ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷವನ್ನು ಸೋಲಿಸಿದ ಬಳಿಕ ಇಂತಹದೊಂದು ಪ್ರಶ್ನೆ ಉದ್ಭವವಾಗಿದೆ.

ಏಕೆಂದರೆ ‍ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ರಾಜಕೀಯ ಪ್ರಾಬಲ್ಯತೆ ಸಾಧಿಸಿದವರೇ ಪಾಕಿಸ್ತಾನ ರಾಷ್ಟ್ರ ಗದ್ದುಗೆಯನ್ನು ಹಿಡಿಯುವುದು ರೂಢಿಗತ. ಇದಕ್ಕೆ ಪೂರಕವಾಗಿಪಾಕಿಸ್ತಾನದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಯಲಿ ಎಂದು ಇಮ್ರಾನ್ ಖಾನ್‌ ಆಗ್ರಹಿಸಿರುವುದು ಕಳೆದ ಏಪ್ರಿಲ್‌ನಲ್ಲಿಇಮ್ರಾನ್ ಖಾನ್ ಅವರ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್‌ನ (ಪಿಡಿಎಂ)ಶಹಬಾಜ್ ಷರೀಫ್ ಅವರಿಗೆ ತಳಮಳ ಶುರುವಾಗಿದೆ.

ಪಂಜಾಬ್ ಪ್ರಾಂತ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಪಾಕಿಸ್ತಾನ್‌ ತೆಹ್ರಿಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷವು ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷವನ್ನು ಸೋಲಿಸಿದ ಬಳಿಕ ಇಮ್ರಾನ್‌ ಅವರುಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಿದ್ದಾರೆ. 20 ಸ್ಥಾನಗಳಲ್ಲಿ ಪಿಟಿಐ 15 ಸ್ಥಾನಗಳನ್ನು ಗೆದ್ದುಕೊಂಡಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಜುಲೈ 22ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಿಟಿಐ-ಪಿಎಂಎಲ್‌ಕ್ಯೂ ಜಂಟಿ ಅಭ್ಯರ್ಥಿ ಚೌಧರಿ ಪರ್ವೇಜ್‌ ಇಲಾಹಿ ಅವರು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿದ್ದಾರೆ.

ಪಂಜಾಬ್ ಪ್ರಾಂತ್ಯದಲ್ಲಿ ಇಮ್ರಾನ್‌ ಪಕ್ಷ ಗೆಲುವು ಸಾಧಿಸಿರುವುದರಿಂದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಹಿನ್ನಡೆಯುಂಟಾಗಿದೆ. ಮಗ ಹಮ್ಜಾಶಹಬಾಜ್ ಅವರು ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರಿಂದ ಇನ್ನೇನಾಗುತ್ತೋ ಎಂಬ ಒತ್ತಡದಲ್ಲಿಷರೀಫ್ ಇದ್ದಾರೆ.

ಇನ್ನೊಂದೆಡೆ ಪಾಕಿಸ್ತಾನದ ಆರ್ಥಿಕ ‍ಪರಿಸ್ಥಿತಿ ಕುಡ ತೀವ್ರ ಜರ್ಜರಿತವಾಗಿದ್ದು ಪಿಟಿಐ ಇದನ್ನೇ ಷರೀಪ್ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಮತ್ತೆ ಅಧಿಕಾರ ಪಡೆಯಬೇಕೆಂದು ಮುನ್ನುಗ್ಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದೇಶಿ ವಿನಿಮಯ ಕೊರತೆ, ನಿರುದ್ಯೋಗ, ಹಣದುಬ್ಬರದಿಂದ ಪಾಕಿಸ್ತಾನ ತತ್ತರಿಸಿದೆ. ರೂಪಾಯಿ ಮೌಲ್ಯ ಕೂಡ ಪಾತಾಳ ಕಂಡಿದೆ. ಪಾಕಿಸ್ತಾನದ ರೂಪಾಯಿ ಮೌಲ್ಯ 212 ಡಾಲರ್‌ ಇದೆ.

ಈ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿಶಹಬಾಜ್ ಷರೀಫ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪಿಟಿಐ ಹಾಗೂ ಅದರ ಮಿತ್ರ ಪಕ್ಷಗಳು ಆರೋಪಿಸಿವೆ. ಒಂಬತ್ತು ಪಕ್ಷಗಳನ್ನು ಕೂಡಿಸಿಕೊಂಡು ಸರ್ಕಾರ ರಚಿಸಿರುವ ಪಿಡಿಎಂ ವಿರುದ್ಧ ಭಾರಿ ಪ್ರತಿಭಟನೆಗಳು ಪಾಕಿಸ್ತಾನದಲ್ಲಿ ಆರಂಭವಾಗಿವೆ. ಈ ಸರ್ಕಾರವನ್ನು ಕೆಡವಲು ಅಲ್ಲಿನ ಸೇನೆಯೇ ಗಂಭೀರ ವಿಚಾರ ಮಾಡುತ್ತಿದೆ ಎನ್ನಲಾಗಿದೆ.

1947ರಲ್ಲಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ಯಾವುದೇ ಚುನಾಯಿತ ಪ್ರಧಾನ ಮಂತ್ರಿಗಳು ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ (ಪಾಕಿಸ್ತಾನ ಸಂಸತ್ತಿನ ಕೆಳಮನೆ) ಕಳೆದ 2018 ಆಗಸ್ಟ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಇದರಲ್ಲಿ 149 ಸೀಟುಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಟಿಐ ಇತರ ಕೆಲ ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ರಚಿಸಿತ್ತು. 2022 ರ ಏಪ್ರಿಲ್‌ನಲ್ಲಿ ಮೈತ್ರಿ ಪಕ್ಷಗಳು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಮಂಡಿಸಿ ಅವರನ್ನು ಪದಚ್ಯುತಗೊಳಿಸಿದ್ದರು.

342 ಸೀಟುಗಳನ್ನು ಹೊಂದಿರುವ ಪಾಕಿಸ್ತಾನ‌ ನ್ಯಾಷನಲ್ ಅಸೆಂಬ್ಲಿಯಲ್ಲಿ 272 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗುತ್ತಾರೆ. ಇನ್ನು 70 ಸದಸ್ಯ ಸ್ಥಾನಗಳನ್ನು ಮಹಿಳೆಯರಿಗೆ, ಧಾರ್ಮಿಕ ಮುಖಂಡರಿಗೆ, ಅಲ್ಪಸಂಖ್ಯಾತರಿಗೆ, ಆದಿವಾಸಿಗಳಿಗೆ ಹಾಗೂ ಇತರರಿಗೆ ಮೀಸಲು ಇಟ್ಟಿರುತ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಂದ ಮತಗಳ ಅನುಪಾತದಲ್ಲಿ ಈ ಸೀಟುಗಳನ್ನು ಹಂಚಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT