ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಪಾತ್ರವಿಲ್ಲ: ಪಾಕಿಸ್ತಾನ ಸೇನೆ

ಇಮ್ರಾನ್‌ ಅವರನ್ನು ಕಳೆದ ವಾರ ಎರಡು ಬಾರಿ ಭೇಟಿಯಾಗಿದ್ದ ಸೇನಾ ಮುಖ್ಯಸ್ಥ
Last Updated 3 ಏಪ್ರಿಲ್ 2022, 19:18 IST
ಅಕ್ಷರ ಗಾತ್ರ

ಲಂಡನ್‌/ಇಸ್ಲಾಮಾಬಾದ್‌: ಪಾಕಿಸ್ತಾನದ ಸದ್ಯದ ರಾಜಕಾರಣದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಅಲ್ಲಿನ ಸೇನೆಯು ಭಾನುವಾರ ಹೇಳಿದೆ. ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸಂಸತ್ತು ವಿಸರ್ಜನೆಗೆ ಮಾಡಿದ ಶಿಫಾರಸನ್ನು ಅಧ್ಯಕ್ಷ ಆರಿಫ್‌ ಅಲ್ವಿ ಅವರು ಒಪ್ಪಿಕೊಂಡ ಬಳಿಕ ಸೃಷ್ಟಿಯಾದ ರಾಜಕೀಯ ಬಿಕ್ಕಟ್ಟಿಗೆ ಸೇನೆಯು ಹೀಗೆ ಪ್ರತಿಕ್ರಿಯೆ ನೀಡಿದೆ.

‘ರಾಜಕೀಯ ಪ್ರಕ್ರಿಯೆಯಲ್ಲಿ ಸೇನೆಯು ಮಾಡುವುದಕ್ಕೆ ಏನೂ ಇಲ್ಲ’ ಎಂದು ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಮೇಜರ್‌ ಜನರಲ್‌ ಬಾಬರ್ ಇಫ್ತಿಕಾರ್‌ ಹೇಳಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ. ಕಮರ್‌ ಜಾವೇದ್‌ ಬಾಜ್ವಾ ಅವರು ಇಮ್ರಾನ್ ಅವರನ್ನು ‌ಕಳೆದ ವಾರ ಎರಡು ಬಾರಿ ಭೇಟಿಯಾಗಿದ್ದರು.

ಸೇನೆಯ ನಾಯಕತ್ವವು ಕಳೆದ ವಾರ ತಮ್ಮನ್ನು ಭೇಟಿ ಮಾಡಿ ಮೂರು ಆಯ್ಕೆಗಳನ್ನು ಮುಂದಿಟ್ಟಿತ್ತು ಎಂದು ಇಮ್ರಾನ್‌ ಹೇಳಿದ್ದಾರೆ. ಇಮ್ರಾನ್‌ ರಾಜೀನಾಮೆ, ಅವಿಶ್ವಾಸ ನಿರ್ಣಯ ಎದುರಿಸುವುದು ಮತ್ತು ಅವಧಿಗೆ ಮುನ್ನವೇ ಚುನಾವಣೆಗೆ ಹೋಗುವುದು ಎಂಬುದೇ ಈ ಮೂರು ಆಯ್ಕೆಗಳಾಗಿದ್ದವು ಎನ್ನಲಾಗಿದೆ.

‘ದೇಶದ್ರೋಹ’:ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸಂಚಿನಲ್ಲಿ ಭಾಗಿಯಾದ ಇತರ ಎಲ್ಲರೂ ದೇಶದ್ರೋಹ ಎಸಗಿದ್ದಾರೆ. ಅವರೆಲ್ಲರನ್ನೂ ಸಂವಿಧಾನಕ್ಕೆ ಅವಮಾನ ಮಾಡಿದ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಹೇಳಿದ್ದಾರೆ.

ದೇಶದ ಸಂಸತ್ತನ್ನು ವಿಸರ್ಜಿಸುವ ಇಮ್ರಾನ್‌ ಅವರ ಶಿಫಾರಸನ್ನು ಅಧ್ಯಕ್ಷ ಆರಿಫ್‌ ಅಲ್ವಿ ಅವರು ಒಪ್ಪಿಕೊಂಡ ಬಳಿಕ ನವಾಜ್‌ ಅವರು ಹೀಗೆ ಹೇಳಿದ್ದಾರೆ.

‘ಅಧಿಕಾರದ ಗೀಳು ಹತ್ತಿಸಿಕೊಂಡ ವ್ಯಕ್ತಿಯು ಸಂವಿಧಾನವನ್ನು ಇಂದು ತುಳಿದು ಹಾಕಿದ್ದಾರೆ’ ಎಂದು ನವಾಜ್‌ ಆರೋಪಿಸಿದ್ದಾರೆ. ಸದ್ಯಕ್ಕೆ ಲಂಡನ್‌ನಲ್ಲಿ ನೆಲೆಯಾಗಿರುವ ನವಾಜ್‌ ಅವರು ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ನ (ಪಿಎಂಎಲ್–ಎನ್‌) ಸರ್ವೋಚ್ಚ ನಾಯಕರಾಗಿದ್ದಾರೆ.

15 ದಿನ ಅಧಿಕಾರ: ಇಮ್ರಾನ್‌ ಅವರು ಮುಂದಿನ 15 ದಿನ ಮಾತ್ರ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಮಾಜಿ ಗೃಹ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ.ಸಂಸತ್ತು ವಿಸರ್ಜನೆ ಮತ್ತು ಹೊಸ ಚುನಾವಣೆಗೆ ಶಿಫಾರಸು ಮಾಡಿದ ಬಳಿಕ ಇಮ್ರಾನ್ ಅವರನ್ನು ಭೇಟಿ ಮಾಡಿದ್ದಾಗಿ ರಶೀದ್‌ ಹೇಳಿದ್ದಾರೆ.

ಭರವಸೆ ಹುಸಿಯಾಗಿಸಿದ ಇಮ್ರಾನ್‌

ಪಾಕಿಸ್ತಾನದ ರಾಷ್ಟ್ರ ರಾಜಕಾರಣದಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌–ಎನ್‌ ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ನಡುವೆ ಹಲವು ದಶಕಗಳ ಕಾಲ ನೇರ ಪೈಪೋಟಿ ಇತ್ತು. ಆದರೆ, ಇಮ್ರಾನ್‌ ಖಾನ್‌ ಅವರು ಈ ಎರಡೂ ಪಕ್ಷಗಳ ವಿರುದ್ಧ ಮೈತ್ರಿಕೂಟವೊಂದನ್ನು ರೂಪಿಸಿದರು. ಇದರೊಂದಿಗೆ, ಈ ಪಕ್ಷಗಳ ಪಾರಮ್ಯ ಮರೆಗೆ ಸರಿಯಿತು.

ದಶಕಗಳಿಂದ ಬೇರು ಬಿಟ್ಟಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ನಿರ್ಮೂಲನೆ ಮಾಡುವ ಭರವಸೆ ಕೊಟ್ಟು ಇಮ್ರಾನ್‌ ಅವರು ಆಯ್ಕೆ ಆಗಿದ್ದರು. ಆದರೆ, ಹಣದುಬ್ಬರ ವಿಪರೀತ ಏರಿಕೆ, ದುರ್ಬಲಗೊಂಡ ಪಾಕಿಸ್ತಾನ ರೂಪಾಯಿ ಮತ್ತು ಏರುತ್ತಲೇ ಹೋದ ಸಾಲದ ಕಾರಣಗಳಿಂದ ಯಾವುದೇ ಸಾಧನೆ ಮಾಡಲು ಇಮ್ರಾನ್‌ಗೆ ಸಾಧ್ಯವಾಗಲಿಲ್ಲ. ಅವರ ಬೆಂಬಲ ನೆಲೆಯೂ ವಿಸ್ತಾರವಾಗಲಿಲ್ಲ.

ಸೇನೆಯ ಬೆಂಬಲವನ್ನೂ ಇಮ್ರಾನ್‌ ಅವರು ಕಳೆದುಕೊಂಡಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇದನ್ನು ಎರಡೂ ಕಡೆಯವರು ಅಲ್ಲಗಳೆದಿದ್ದಾರೆ. ಸೇನೆಯ ಒತ್ತಾಸೆ ಇಲ್ಲದಿದ್ದರೂ ಅದರ ಅರಿವಿಗೆ ಬಾರದೆಯೇ ಸಂಸತ್ತು ವಿಸರ್ಜನೆಯ ನಿರ್ಧಾರಕ್ಕೆ ಇಮ್ರಾನ್‌ ಬರುವುದು ಸಾಧ್ಯವಿರಲಿಲ್ಲ ಎಂದೂ ಹೇಳಲಾಗುತ್ತಿದೆ.

1947ರಲ್ಲಿ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಸೇನೆಯು ನಾಲ್ಕು ಬಾರಿ ಅಧಿಕಾರವನ್ನು ವಶಕ್ಕೆ ಪಡೆದುಕೊಂಡಿದೆ. ಹಲವು ಬಾರಿ ವಿಫಲ ಯತ್ನಗಳು ನಡೆದಿವೆ. ಮೂರು ದಶಕಕ್ಕೂ ಹೆಚ್ಚು ಕಾಲ ದೇಶವು ಸೇನೆಯ ಆಳ್ವಿಕೆಯಲ್ಲಿ ಇತ್ತು.

‘ಈಗ ಚುನಾವಣೆ ನಡೆಸುವುದೇ ಅತ್ಯುತ್ತಮ ಆಯ್ಕೆ. ದೇಶವು ಎದುರಿಸುತ್ತಿರುವ ಆರ್ಥಿಕ, ರಾಜಕೀಯ ಮತ್ತು ಬಾಹ್ಯ ಸಮಸ್ಯೆಗಳನ್ನು ಪರಿಹರಿಸಲು ಹೊಸ ಸರ್ಕಾರಕ್ಕೆ ಸಾಧ್ಯವಾಗಬಹುದು’ ಎಂದು ರಾಜಕೀಯ ವಿಶ್ಲೇಷಕ ತಲತ್‌ ಮಸೂದ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT