ಪಾಕಿಸ್ತಾನ: ವಿಕಿಪೀಡಿಯಾ ಮೇಲಿನ ನಿಷೇಧ ತೆರವು

ಇಸ್ಲಾಮಾಬಾದ್: ಧರ್ಮನಿಂದನೆಯ ಮಾಹಿತಿ ನೀಡಲಾಗಿದೆ ಎಂಬ ಕಾರಣಕ್ಕಾಗಿ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾ ಮೇಲೆ ಹೇರಲಾಗಿದ್ದ ನಿಷೇಧವನ್ನು ಪಾಕಿಸ್ತಾನ ಮಂಗಳವಾರ ಹಿಂಪಡೆದಿದೆ.
ಆಕ್ಷೇಪಾರ್ಹ ಮತ್ತು ಧರ್ಮನಿಂದನೆಯ ಮಾಹಿತಿಯನ್ನು ತೆಗೆದುಹಾಕುವಂತೆ ವಿಕಿಪೀಡಿಯಾಕ್ಕೆ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು (ಪಿಟಿಎ) ಕಳೆದವಾರ 48 ಗಂಟೆಗಳ ಸಮಯಾವಕಾಶ ನೀಡಿತ್ತು. ಈ ಸೂಚನೆಯನ್ನು ಪಾಲಿಸದ ಕಾರಣ ವಿಕಿಪೀಡಿಯಾ ಮೇಲೆ ಪಿಟಿಎ ನಿಷೇಧ ಹೇರಿತ್ತು.
ಕೂಡಲೇ ಈ ನಿಷೇಧವನ್ನು ಹಿಂಪಡೆಯುವಂತೆ ಪಾಕಿಸ್ತಾನದ ಮೂವರು ಸಚಿವರ ಸಮಿತಿಯು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ, ನಿಷೇಧ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಶೆಹಬಾಜ್ ಷರೀಫ್ ಆದೇಶ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ವಿಕಿಪೀಡಿಯಾ ಮತ್ತು ಇತರ ಆನ್‌ಲೈನ್ ವೇದಿಕೆಗಳಲ್ಲಿ ಪ್ರಕಟವಾಗುವ ವಸ್ತು ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ಅವರು ಸಂಪುಟ ಸಮಿತಿ ರಚಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವೆ ಮಾರಿಯಮ್ ಔರಂಗಜೇಬ್ ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.