ಫಿಲಿಪ್ಪಿನ್ಸ್: ಸೇನಾ ವಿಮಾನ ಅಪಘಾತ, 45 ಮಂದಿ ಸಾವು

ಮನಿಲಾ: ಮುಸ್ಲಿಂ ಉಗ್ರರ ವಿರುದ್ಧ ಹೋರಾಡಲು ನಿಯೋಜಿಸಲಾಗಿದ್ದ ಯೋಧರನ್ನು ಹೊತ್ತಿದ್ದ ಫಿಲಿಪ್ಪಿನ್ಸ್ ವಾಯುಪಡೆಯ ಸಿ–130 ವಿಮಾನವು ಭಾನುವಾರ ಅಪಘಾತಕ್ಕೀಡಾಗಿದ್ದು ಒಟ್ಟು 45 ಜನರು ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 42 ಯೋಧರು ಮತ್ತು ನೆಲದ ಮೇಲಿದ್ದ ಮೂವರು ನಾಗರಿಕರು ಮೃತಪಟ್ಟಿದ್ದಾರೆ. 49 ಜನರನ್ನು ರಕ್ಷಿಸಲಾಗಿದೆ ಎಂದು ಫಿಲಿಪೀನ್ಸ್‌ನ ಸೇನಾ ಮುಖ್ಯಸ್ಥರು ತಿಳಿಸಿದರು.
‘ಫಿಲಿಪ್ಪಿನ್ಸ್‌ನ ಸುಲು ಪ್ರಾಂತ್ಯದ ಪಾಟಿಕುಲ್ ನಗರದಲ್ಲಿ ಈ ದುರಂತ ಸಂಭವಿಸಿದೆ. ವಿಮಾನವು ರನ್‌ವೇಯಲ್ಲಿ ಇಳಿಯಲು ಸಾಧ್ಯವಾಗದೆ, ಅಪಘಾತ ಸಂಭವಿಸಿದೆ. ವಿಮಾನದ ಭಗ್ನಾವಶೇಷಗಳಡಿ ಸಿಲುಕಿದ್ದ ಕನಿಷ್ಠ 49 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್ ಸಿರಿಲಿಟೊ ಸೊಬೆಜಾನಾ ಹೇಳಿದರು.
ವಿಮಾನದಲ್ಲಿ ಒಟ್ಟು 96 ಜನರಿದ್ದರು. ಇದರಲ್ಲಿ ಮೂವರು ಪೈಲಟ್‌ಗಳು, ಐವರು ಸಿಬ್ಬಂದಿಯಾಗಿದ್ದು, ಉಳಿದವರು ಸೇನಾ ಸಿಬ್ಬಂದಿ ಮತ್ತು ಮಿಲಿಟರಿ ಅಧಿಕಾರಿಗಳು. ಪೈಲಟ್‌ಗಳು ಬದುಕುಳಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಮಾನವು ನೆಲಕ್ಕೆ ಅಪ್ಪಳಿಸಿದಾಗ ಅಲ್ಲಿದ್ದ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಐವರು ಯೋಧರ ಲೆಕ್ಕ ಇನ್ನೂ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.
ವಿಮಾನ ನೆಲಕ್ಕೆ ಅಪ್ಪಳಿಸುವುದಕ್ಕೂ ಮೊದಲು ಹಲವು ಸೈನಿಕರು ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸೇನೆ ಪ್ರಕಟಣೆ ಹೊರಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.