ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ: ಪ್ರಧಾನಿ ಮೋದಿ

Last Updated 26 ಮಾರ್ಚ್ 2021, 18:31 IST
ಅಕ್ಷರ ಗಾತ್ರ

ಢಾಕಾ: ‘ನನಗೆ ಆಗ 20–22 ವರ್ಷ ಇರಬಹುದೇನೋ. ನಾನು ಮತ್ತು ನನ್ನ ಸಹಪಾಠಿಗಳು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆವು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ 1971ರಲ್ಲಿ ನಡೆದಿದ್ದ ಯುದ್ಧದ ದಿನಗಳನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು.

ಎರಡು ದಿನದ ಭೇಟಿಗಾಗಿ ಇಲ್ಲಿಗೆ ಬಂದಿರುವ ಪ್ರಧಾನಿ, ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 1971ರ ಸ್ವಾತಂತ್ರ್ಯದ ಹೋರಾಟದಲ್ಲಿ ಬಂಗಬಂಧು ಶೇಖ್‌ ಮುಜಿಬುರ್ ರೆಹಮಾನ್‌ ಅವರ ನಾಯಕತ್ವ ಮತ್ತು ಭಾರತೀಯ ಸೇನೆಯ ಕೊಡುಗೆಯನ್ನು ಅವರು ಸ್ಮರಿಸಿ, ಶ್ಲಾಘಿಸಿದರು.

1971ರ ಯುದ್ಧದ ದಿನಗಳನ್ನು ಸ್ಮರಿಸಿದ ಅವರು, ಪಾಕಿಸ್ತಾನದ ಸೇನೆಯು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಜನರ ಮೇಲೆ ನಡೆಸಿದ್ದ ದೌರ್ಜನ್ಯದ ಚಿತ್ರಗಳು, ಭಾರತೀಯರಲ್ಲಿ ಕಳವಳವನ್ನು ಮೂಡಿಸಿದ್ದವು ಎಂದು ಹೇಳಿದರು.

‘ಇದೊಂದು ಅವಿಸ್ಮರಣಿಯ ದಿನ. ಬಾಂಗ್ಲಾದೇಶ ಈ ಸಮಾರಂಭದಲ್ಲಿ ನನ್ನನ್ನೂ ಭಾಗಿಯಾಗಿಸಿದ್ದು ಸಂತಸ ಮೂಡಿಸಿದೆ’ ಎಂದು ಮೋದಿ ಹೇಳಿದರು.

ಮುಂದಿನ 25 ವರ್ಷ ಭಾರತ ಮತ್ತು ಬಾಂಗ್ಲಾದೇಶಕ್ಕೆ ನಿರ್ಣಾಯಕವಾದುದು. ಪರಂಪರೆ, ಅಭಿವೃದ್ಧಿ, ಪ್ರಗತಿಯ ಗುರಿ ಮತ್ತು ಅವಕಾಶ ಎಲ್ಲವನ್ನು ಹಂಚಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಗಾಂಧಿ ಶಾಂತಿ ಪ್ರಶಸ್ತಿಯನ್ನು ಶೇಖ್‌ ಮುಜಿಬುರ್ ರೆಹಮಾನ್‌ ಅವರಿಗೆ ಮರಣೋತ್ತರವಾಗಿ ನೀಡಿದ್ದು, ಕಳೆದ ವಾರ ಪ್ರಕಟಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ‘ಗಾಂಧಿ ಶಾಂತಿ ಪ್ರಶಸ್ತಿ’ಯನ್ನು ಪ್ರಧಾನಿ ಮೋದಿ ಅವರು, ಬಂಗಬಂಧು ಅವರ ಪುತ್ರಿಯರಾದ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಮತ್ತು ಶೇಖ್‌ ರೆಹನಾ ಅವರಿಗೆ ಪ್ರಧಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT