ವಾರ್ಸಾವ್(ಪೊಲೆಂಡ್): ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನಾಯಿ ಮತ್ತು ಕುದುರೆಗಳ ಭವಿಷ್ಯದ ಕಲ್ಯಾಣಕ್ಕಾಗಿ ಹಾಗೂ ರಕ್ಷಣೆಗಾಗಿ ಅವುಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಪೊಲೆಂಡ್ ಸರ್ಕಾರ ಮುಂದಾಗಿದೆ.
ಅವಶೇಷಗಳಡಿ ಬದುಕುಳಿದವರನ್ನು ಪತ್ತೆ ಹಚ್ಚುವ, ಕಳ್ಳರು, ಕೊಲೆಗಾರರನ್ನು ಹುಡುಕಿಕೊಡುವ, ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ಮತ್ತು ಇಲಾಖೆಯ ಅಧಿಕಾರಿಗಳಿಗೆ ನೆರವಾಗುವ ನಾಯಿ ಮತ್ತು ಕುದುರೆಗಳಿಗೆ, ನಿವೃತ್ತಿಯ ನಂತರ ರಕ್ಷಣೆ ಇರುವುದಿಲ್ಲ. ಇವುಗಳಿಗೆ ಭವಿಷ್ಯದಲ್ಲಿ ರಕ್ಷಣೆ ನೀಡುವ ಹಾಗೂ ಆರೈಕೆ ಮಾಡುವುದಕ್ಕಾಗಿ ಸರ್ಕಾರ ಈ ಪಿಂಚಣಿ ಯೋಜನೆ ಜಾರಿಗೆ ತರುವ ಪ್ರಸ್ತಾವವನ್ನು ಸಿದ್ಧಪಡಿಸಿದೆ.
ಈ ಪ್ರಾಣಿಗಳ ರಕ್ಷಣೆ ಕಾರ್ಯದಲ್ಲಿ ತೊಡಗಿರುವವರು ನೀಡಿದ ಮನವಿ ಪರಿಗಣಿಸಿ, ಗೃಹ ಸಚಿವಾಲಯ, ಈ ಪ್ರಾಣಿಗಳಿಗೆ ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹೊಸ ಮಸೂದೆಯ ಪ್ರಸ್ತಾವವನ್ನು ಸಿದ್ಧಪಡಿಸಿದೆ. ಇದರಲ್ಲಿ ನಿವೃತ್ತಿಯ ನಂತರ ಈ ಪ್ರಾಣಿಗಳ ವಾರಸುದಾರರಿಗೆ ಪಿಂಚಣಿ ನೀಡುವುದನ್ನು ಉಲ್ಲೇಖಿಸಲಾಗಿದೆ.
ಗೃಹ ಸಚಿವ ಮಾರಿಯಸ್ಜ್ ಕಾಮಿನ್ಸ್ಕಿ ‘ಈ ಕರಡು ಮಸೂದೆ ರೂಪಿಸುವುದು ನೈತಿಕ ಜವಾಬ್ದಾರಿ ಎಂದು ಬಣ್ಣಿಸಿದ್ದು, ಇದನ್ನು ವರ್ಷದ ಕೊನೆಯಲ್ಲಿ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುತ್ತಿದ್ದು, ಇದಕ್ಕೆ ಸರ್ವಾನುಮತದ ಬೆಂಬಲ ದೊರೆಯುವ ವಿಶ್ವಾಸವಿದೆ‘ ಎಂದು ಹೇಳಿದ್ದಾರೆ.
ಈ ಹೊಸ ಕಾನೂನು ಜಾರಿಯಾದರೆ ಪ್ರಸ್ತುತ ಸೇವೆಯಲ್ಲಿರುವ ಸುಮಾರು 1200 ನಾಯಿಗಳು ಮತ್ತು 60 ಕುದುರೆಗಳು, ಪಿಂಚಿಣಿ ಸೌಲಭ್ಯದ ಅನುಕೂಲ ಪಡೆಯಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.