ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈತಿಕ’ ಪೊಲೀಸ್‌ಗಿರಿ ರದ್ದುಪಡಿಸಿದ ಇರಾನ್

ತೀವ್ರಗೊಳ್ಳುತ್ತಿರುವ ಹಿಜಾಬ್‌ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಹೆಣಗುತ್ತಿರುವ ಸರ್ಕಾರ
Last Updated 4 ಡಿಸೆಂಬರ್ 2022, 13:36 IST
ಅಕ್ಷರ ಗಾತ್ರ

ಟೆಹರಾನ್: ಇರಾನ್‌ನಲ್ಲಿ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಕುರ್ದಿಷ್ ಯುವತಿ ಮಹ್ಸಾ ಅಮಿನಿ ಬಂಧನ ಹಾಗೂ ಸಾವಿನ ಬಳಿಕ ನಡೆದ ಎರಡು ತಿಂಗಳ ತೀವ್ರ ಪ್ರತಿಭಟನೆಯ ನಂತರ ಅಲ್ಲಿನ ಸರ್ಕಾರವು ತನ್ನ ‘ನೈತಿಕ’ ಪೊಲೀಸ್‌ಗಿರಿಯನ್ನು ರದ್ದುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

‘ನ್ಯಾಯಾಂಗದೊಂದಿಗೆ ‘ನೈತಿಕ’ ಪೊಲೀಸ್‌ಗಿರಿಯ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಅದನ್ನು ರದ್ದುಪಡಿಸಲಾಗಿದೆ’ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆ’ ಎಂದು ಐಎಸ್‌ಎನ್‌ಎ ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮೊಹಮ್ಮದ್ ‘ನೈತಿಕ’ ಪೊಲೀಸ್‌ಗಿರಿಯನ್ನು ರದ್ಡುಪಡಿಸಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂಬ ಕಾನೂನನ್ನು ಬದಲಾಯಿಸುವ ಅಗತ್ಯವಿದೆಯೇ ಎಂಬ ಕುರಿತು ಸಂಸತ್ತು ಮತ್ತು ನ್ಯಾಯಾಂಗ ಎರಡೂ ಜತೆಗೂಡಿ ಕೆಲಸ ಮಾಡುತ್ತಿವೆ ಎಂದು ಅಟಾರ್ನಿ ಜನರಲ್ ಹೇಳಿಕೆ ನೀಡಿದ ಮರುದಿನವೇ ‘ನೈತಿಕ’ ಪೊಲೀಸ್‌ಗಿರಿ ರದ್ದುಪಡಿಸಿರುವ ಹೇಳಿಕೆಯು ಹೊರಬಿದ್ದಿದೆ.

‘ನೈತಿಕ’ ಪೊಲೀಸ್‌ಗಿರಿಯ ಹೆಸರಿನಲ್ಲಿ ಮಹ್ಸಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಸೆ. 16ರಂದು ಅವರು ಪೊಲೀಸ್ ಕಸ್ಟಡಿಯಲ್ಲೇ ಸಾವಿಗೀಡಾಗಿದ್ದರು. ಇದಾದ ಬಳಿಕ ಇರಾನ್‌ನಾದ್ಯಂತ ಮಹಿಳೆಯರು ಹಿಜಾಬ್ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ತಾವು ಧರಿಸಿದ್ದ ಹಿಜಾಬ್‌ಗಳನ್ನು ಸುಟ್ಟುಹಾಕಿದ್ದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಟೆಹರಾನ್‌ನ ಕೆಲ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಿಜಾಬ್ ಧರಿಸದೇ ಪ್ರತಿಭಟಿಸಿದ್ದರು.

ಈ ಪ್ರತಿಭಟನೆಯ ಬೆಂಬಲವಾಗಿಜಗತ್ತಿನಾದ್ಯಂತ ಅನೇಕ ಮಹಿಳೆಯರು ತಲೆಕೂದಲನ್ನು ಕತ್ತರಿಸಿಕೊಂಡು, ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಮಹಿಳೆ ಮತ್ತು ಪುರುಷ ಇಬ್ಬರಿಗೂ ವಸ್ತ್ರಸಂಹಿತೆ ರೂಪಿಸಲಾಗಿತ್ತು. ಆಗಿನ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ನೇತ್ವತದಲ್ಲಿ ಹಿಜಾಬ್ ಸಂಸ್ಕೃತಿಯನ್ನು ಹರಡುವ ಸಲುವಾಗಿ ಔಪಚಾರಿಕವಾಗಿ ‘ನೈತಿಕ’ ಪೊಲೀಸ್‌ಗಿರಿ ವ್ಯವಸ್ಥೆ ‘ಗಶ್ಟ್ – ಎ– ಇರ್ಷಾದ್’ ಅನ್ನು ಜಾರಿಗೊಳಿಸಲಾಗಿತ್ತು.1983ರಲ್ಲಿ ಹಿಜಾಬ್ ಅನ್ನು ಮಹಿಳೆಯರಿಗೆ ಕಡ್ಡಾಯಗೊಳಿಸಲಾಯಿತು. 2006ರಲ್ಲಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಗಸ್ತುಪಡೆಗಳನ್ನೂ ಪ್ರಾರಂಭಿಸಲಾಯಿತು.

ಮುಷ್ಕರಕ್ಕೆ ಕರೆ: ಈ ನಡುವೆ ಟೆಹರಾನ್‌ ವಿಶ್ವವಿದ್ಯಾಲಯಕ್ಕೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭೇಟಿ ನೀಡುತ್ತಿದ್ದು, ಮಹ್ಸಾ ಅಮಿನಿ ಸಾವು ವಿರೋಧಿಸಿ, ಸೋಮವಾರರಿಂದ ಮೂರು ದಿನಗಳ ಆರ್ಥಿಕ ಚಟುವಟಿಕೆಗಳನ್ನು ಬಹಿಷ್ಕರಿಸುವಂತೆ ಪ್ರತಿಭಟನಕಾರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT