ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elizabeth II | ಸಕಲ ಗೌರವದೊಂದಿಗೆ 2ನೇ ಎಲಿಜಬೆತ್‌ ಅಂತ್ಯಕ್ರಿಯೆ

2ನೇ ಎಲಿಜಬೆತ್‌ ಇನ್ನು ಇತಿಹಾಸ * ಅಂತಿಮ ವಿದಾಯಕ್ಕೆ ಸಾಕ್ಷಿಯಾದ ವಿಶ್ವನಾಯಕರ ಗಣ
Last Updated 20 ಸೆಪ್ಟೆಂಬರ್ 2022, 1:45 IST
ಅಕ್ಷರ ಗಾತ್ರ

ಲಂಡನ್‌: ಸುದೀರ್ಘ ಅವಧಿಗೆಬ್ರಿಟನ್‌ನ ರಾಣಿಯಾಗಿದ್ದ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಸೋಮವಾರ ರಾಜಮನೆತನದ ಸಂಪ್ರದಾಯ, ಸರ್ಕಾರಿ ಗೌರವದೊಂದಿಗೆ ಇಲ್ಲಿನ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯಿತು.‌

ಬ್ರಿಟನ್‌ ಪ್ರಜೆಗಳ ಗೌರವ ನಮನ, ದುಃಖದೊಂದಿಗೆ ರಾಣಿಗೆ ವಿದಾಯ ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿ ವಿವಿಧ ರಾಷ್ಟ್ರಗಳ 500ಕ್ಕೂ ಹೆಚ್ಚು ನಾಯಕರ ಗಣ ರಾಣಿಯ ಅಂತಿಮಯಾತ್ರೆಗೆ ಸಾಕ್ಷಿಯಾಯಿತು.

ಸುಮಾರು 70 ವರ್ಷ ಬ್ರಿಟನ್‌ನ ರಾಣಿಯಾಗಿದ್ದ 96 ವರ್ಷದ 2ನೇ ಎಲಿಜಬೆತ್‌ ಅವರು ಈ ಮೂಲಕ ಇತಿಹಾಸದ ಪುಟ ಸೇರಿದರು. ಅಲ್ಪಕಾಲದ ಅಸ್ವಸ್ಥತೆಯ ನಂತರ ಸೆ. 8ರಂದು ಆವರು ತಮ್ಮ ಬಲ್‌ಮೊಹರ್‌ ಕ್ಯಾಸ್ಟಲ್‌ ನಿವಾಸದಲ್ಲಿ ಮೃತಪಟ್ಟಿದ್ದರು.

ಸೋಮವಾರ ಬೆಳಿಗ್ಗೆ 6.30 ಗಂಟೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ಆರಂಭವಾದವು. ಸರ್ಕಾರಿ ಗೌರವದೊಂದಿಗೆ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಅಂತ್ಯಕ್ರಿಯೆ ನಡೆಯಿತು.

ರಾಣಿಯ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಕಡೆಯದಾಗಿ ನೋಡಿದ ಸ್ಥಳೀಯ ಪ್ರಜೆಯು, ‘ಇದು ನನ್ನ ಬದುಕಿನ ಪ್ರಮುಖ ಕ್ಷಣಗಳಲ್ಲಿ ಒಂದು’ ಎಂದು ಪ್ರತಿಕ್ರಿಯಿಸಿದರು.

ನೇರ ಪ್ರಸಾರ: ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸುಮಾರು 125 ಸಿನಿಮಾ ಮಂದಿರಗಳು, ಹಲವು ಕ್ಯಾಥೆಡ್ರಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಹಾಲಿರೂಡ್ ಪಾರ್ಕ್‌ನಲ್ಲಿ ವಿಶಾಲ ಪರದೆ ಅಳವಡಿಸಲಾಗಿತ್ತು.

ಅಂತ್ಯಕ್ರಿಯೆಗೆ ಸ್ವಲ್ಪ ಮೊದಲು ರಾಜಮನೆತನದವರು ರಾಣಿ 2ನೇ ಎಲಿಜಬೆತ್‌ ಅವರ ಕೊನೆಯ ಭಾವಚಿತ್ರವನ್ನು ಬಿಡುಗಡೆ ಮಾಡಿದರು. ತಿಳಿ ನೀಲಿ ಉಡುಪಿನಲ್ಲಿ ಹಸನ್ಮುಖಿ ಭಾವದಲ್ಲಿದ್ದ ರಾಣಿಯ ಚಿತ್ರ ಅದಾಗಿತ್ತು.

ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌, ಕಾಮನ್‌ವೆಲ್ತ್‌ನ ಪ್ರಧಾನ ಕಾರ್ಯದರ್ಶಿ ಬರೊನೆಸ್‌ ಪ್ಯಾಟ್ರಿಕಾ ಅವರು ರಾಣಿಯ ಸೇವೆಯನ್ನು ಸ್ಮರಿಸುವ ಅಧ್ಯಾಯಗಳನ್ನು ಓದಿದರು.

ಸಾಂಪ್ರದಾಯಿಕ ಗೌರವ ಸಲ್ಲಿಸುವ ಕಾರ್ಯದಲ್ಲಿ ಸುಮಾರು 4,000 ಸೇನಾ ಯೋಧರು ಭಾಗವಹಿಸಿದ್ದರು. ಈ ಹಿಂದೆ ಇಂತಹದೇ ಸರ್ಕಾರಿ ಗೌರವವನ್ನು 1965ರಲ್ಲಿ ನಿಧನರಾಗಿದ್ದ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ನೀಡಲಾಗಿತ್ತು.

ಸೇಂಟ್ ಜಾರ್ಜ್‌ ಚಾಪಲ್‌ನಲ್ಲಿ, ರಾಣಿಯ ಪತಿ ರಾಜ ಫಿಲಿಪ್‌ರ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದ ಪಕ್ಕದಲ್ಲೇ ರಾಣಿ 2ನೇ ಎಲಿಜಬೆತ್‌ ಅವರ ಶರೀರವನ್ನು ಸಮಾಧಿ ಮಾಡಲಾಯಿತು. ರಾಜ ಫಿಲಿಪ್‌ 99ನೇ ವಯಸ್ಸಿನಲ್ಲಿ ಏ.9, 2021ರಂದು ಮೃತಪಟ್ಟಿದ್ದರು.

ಅಂತ್ಯಕ್ರಿಯೆ ವಿಧಿವಿಧಾನ ಅಂತ್ಯಗೊಂಡ ಸೂಚನೆಯಾಗಿ ಇಂಗ್ಲೆಂಡ್‌ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಣಿಯ ಗೌರವಾರ್ಥ ದೇಶದಾದ್ಯಂತ ಎರಡು ನಿಮಿಷ ಮೌನ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT