ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ: ಪ್ರತಿಭಟನಕಾರರ ಮೇಲೆ ಪೊಲೀಸರ ಬಲ ಪ್ರಯೋಗ

ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಬಂಧನಕ್ಕೆ ಖಂಡನೆ
Last Updated 24 ಜನವರಿ 2021, 15:06 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ವಿರೋಧಿ ಅಲೆಕ್ಸಿ ನವಾಲ್ನಿ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ರಷ್ಯಾ ಪೊಲೀಸರು ಬಲ ಪ್ರಯೋಗ ನಡೆಸಿದ್ದು, ಸುಮಾರು 3,500 ಜನರನ್ನು ವಶಕ್ಕೆ ಪಡೆದಿದ್ದಾರೆ.

ಪುಟಿನ್‌ ಅವರ ಎರಡು ದಶಕಗಳ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ನವಾಲ್ನಿ ಕರೆ ನೀಡಿದ್ದರು. ಹೀಗಾಗಿ ಮಾಸ್ಕೊದಲ್ಲಿ ಶನಿವಾರ ಸಾವಿರಾರು ಮಂದಿ ಬೀದಿಗಿಳಿದಿದ್ದರು. ಪ್ರತಿಭಟನನಿರತರನ್ನು ಪೊಲೀಸರು ತಡೆಯಲು ಮುಂದಾದಾಗ ಘರ್ಷಣೆ ಸಂಭವಿಸಿತ್ತು. ಪ್ರತಿಭಟನಕಾರರ ಪೈಕಿ ಹಲವರು ಗಲಭೆಯಲ್ಲಿ ಗಾಯಗೊಂಡಿದ್ದಾರೆ.

‘ಮಾಸ್ಕೊದಲ್ಲಿ ನಡೆದ ಪ್ರತಿಭಟನೆ ವೇಳೆ ಗೂಂಡಾಗಿರಿ ನಡೆಸಲಾಗಿದೆ. ಆಸ್ತಿಪಾಸ್ತಿಗೂ ಹಾನಿಯಾಗಿದೆ. ಕಾನೂನು ಜಾರಿಗೊಳಿಸಲು ಮುಂದಾದವರ ಮೇಲೆ ದಾಳಿ ನಡೆಸಲಾಗಿದೆ. ಇದು ಕ್ರಿಮಿನಲ್‌ ಅಪರಾಧ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತದೆ’ ಎಂದು ತನಿಖಾ ಸಮಿತಿಯು ತಿಳಿಸಿದೆ.

‘ವಿಡಿಯೊ ಮತ್ತು ಫೋಟೊಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿಸಲಾಗುತ್ತದೆ’ ಎಂದೂ ಸಮಿತಿ ಹೇಳಿದೆ.

‘ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ಬಂಧಿಸಲಾಗಿದೆ’ ಎಂದು ಸಮಿತಿಯು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ.

‘ಗಲಭೆಯ ವೇಳೆ ಗಾಯಗೊಂಡಿದ್ದ 29 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ’ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಮಾಸ್ಕೊದಲ್ಲಿ ಬಂಧಿಸಲಾಗಿದ್ದ ಪ್ರತಿಭಟನಕಾರರ ಪೈಕಿ ಹಲವರನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ವೈರಾಣು ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆಯೂ ಪ್ರತಿಭಟನೆ ನಡೆಸಿರುವುದು ಸರಿಯಲ್ಲ’ ಎಂದು ಕ್ರೆಮ್ಲಿನ್‌ನ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥ ವಲೆರಿ ಫೆಡೆಯೆವ್‌ ಹೇಳಿದ್ದಾರೆ.

‘ಚೀನಾದ ಟಿಕ್‌ ಟಾಕ್‌ ಆ್ಯಪ್‌, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಪ್ರಚೋದಿಸಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ’ ಎಂದು ಅವರು ನುಡಿದಿದ್ದಾರೆ.

ಮಹಿಳೆಯ ಹೊಟ್ಟೆಗೆ ಒದ್ದ ಪೊಲೀಸ್‌

ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಧ್ಯ ವಯಸ್ಕ ಮಹಿಳೆಯ ಹೊಟ್ಟೆಗೆ ಪೊಲೀಸ್‌ ಅಧಿಕಾರಿಯೊಬ್ಬರು ಜಾಡಿಸಿ ಒದ್ದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಕೆಯ ಹೆಸರು ಮಾರ್ಗರಿಟಾ ಯುದಿನಾ ಎಂದು ಹೇಳಲಾಗಿದೆ.

ಯುವಕನೊಬ್ಬನನ್ನು ಮೂವರು ಪೊಲೀಸರು ಬಂಧಿಸಿದ್ದನ್ನು ಮಾರ್ಗರಿಟಾ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಪೊಲೀಸ್‌ ಅಧಿಕಾರಿ ಅವರ ಹೊಟ್ಟೆಗೆ ಜಾಡಿಸಿ ಒದ್ದಿದ್ದಾರೆ. ಆ ರಭಸಕ್ಕೆ ಮಾರ್ಗರಿಟಾ ನೆಲಕ್ಕೆ ಕುಸಿದು ಬಿದ್ದಿರುವ ದೃಶ್ಯ ವಿಡಿಯೊದಲ್ಲಿದೆ.

‘ಮಾರ್ಗರಿಟಾ ತಲೆಗೂ ಬಲವಾದ ಏಟು ಬಿದ್ದಿದೆ. ಅವರ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಡಿಸಾನೆಲಿಡೆ ಆಸ್ಪತ್ರೆಯ ಪ್ರತಿನಿಧಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ದೇಶದ 100 ನಗರಗಳಲ್ಲಿ ಪ್ರತಿಭಟನೆ

ದೇಶದ100ಕ್ಕೂ ಹೆಚ್ಚು ನಗರಗಳಲ್ಲಿ ಶನಿವಾರ ಪ್ರತಿಭಟನೆಯ ಕಾವು ಆವರಿಸಿತ್ತು. ಮಾಸ್ಕೊದಲ್ಲಿ ಸುಮಾರು20 ಸಾವಿರ ಹಾಗೂ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ10 ಸಾವಿರಕ್ಕೂ ಅಧಿಕ ಮಂದಿ ಬೀದಿಗಿಳಿದಿದ್ದರು. ಈ ಪೈಕಿ ಮಾಸ್ಕೊದಲ್ಲಿ1,360 ಮಂದಿ ಹಾಗೂ ಪೀಟರ್ಸ್‌ಬರ್ಗ್‌ನಲ್ಲಿ523 ಜನರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT