ಬುಧವಾರ, ಜುಲೈ 6, 2022
22 °C
ಕೀವ್‌ಗೆ ರಹಸ್ಯ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌ ಹೇಳಿಕೆ

ರಷ್ಯಾಕ್ಕೆ ಸೋಲು; ಉಕ್ರೇನ್‌ಗೆ ಯಶಸ್ಸು: ಅಮೆರಿಕದ ಬ್ಲಿಂಕೆನ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೀವ್‌ (ಎಪಿ): ಕೀವ್‌ ನಗರಕ್ಕೆ ರಹಸ್ಯ ಭೇಟಿ ನೀಡಿದ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಜೆ. ಬ್ಲಿಂಕೆನ್‌ ‘ಯುದ್ಧದಲ್ಲಿ ಗುರಿ ಸಾಧಿಸಲು ರಷ್ಯಾ ವಿಫಲವಾಗಿದೆ, ಉಕ್ರೇನ್‌ ಯಶಸ್ವಿಯಾಗುತ್ತಿದೆ’ ಎಂದು ಹೇಳಿದ್ದಾರೆ.

ಫೆಬ್ರುವರಿ 24ರಂದು ರಷ್ಯಾ, ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ, ಉಕ್ರೇನ್‌ ರಾಜಧಾನಿ ಕೀವ್‌ಗೆ ಅಮೆರಿಕದ ಉನ್ನತಮಟ್ಟದ ನಾಯಕರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. 

‘ಅಮೆರಿಕವು 30 ಕೋಟಿ ಡಾಲರ್‌ಗೂ (₹2,280 ಕೋಟಿ) ಹೆಚ್ಚಿನ ಮೊತ್ತದ ವಿದೇಶಿ ಸೇನಾ ನೆರವನ್ನು ಉಕ್ರೇನ್‌ಗೆ ಒದಗಿಸಲಿದೆ. ಹಾಗೆಯೇ 16.5 ಕೋಟಿ ಡಾಲರ್‌ (₹1,254 ಕೋಟಿ) ಮೊತ್ತದ ಮದ್ದುಗುಂಡುಗಳನ್ನು ಮಾರಾಟ ಮಾಡಲು ಅನುಮೋದಿಸಿದೆ’ ಎಂದು ಬ್ಲಿಂಕೆನ್‌, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ
ಮತ್ತು ಅವರ ಸಲಹೆಗಾರರಿಗೆ ತಿಳಿಸಿದರು. 

‘ಉಕ್ರೇನ್‌ ಸರ್ಕಾರ ಮತ್ತು ಅಲ್ಲಿನ ಜನತೆಗೆ ಬಲವಾದ ಬೆಂಬಲವನ್ನು ನೇರವಾಗಿ ನೀಡಲು ನಮಗೆ ಅವಕಾಶವಿದೆ. ಇದು ನಮ್ಮ ತೀರ್ಮಾನವೂ ಹೌದು. ಕೀವ್‌ನಲ್ಲಿ ಮುಖಾಮುಖಿ ಮಾತುಕತೆ ವೇಳೆ ಎಲ್ಲವನ್ನೂ ವಿವರಿಸಿದ್ದು ಪ್ರಮುಖ ಕ್ಷಣ. ಝೆಲೆನ್‌ಸ್ಕಿ ಮತ್ತು ಅವರ ಸಲಹೆಗಾರರೊಂದಿಗೆ ಮೂರು ತಾಸಿನ ಸಂಭಾಷಣೆ ನಡೆಯಿತು’ ಎಂದು ಬ್ಲಿಂಕೆನ್, ಪೋಲೆಂಡ್‌ ಗಡಿ ಬಳಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಸುಧಾರಿತ ಶಸ್ತ್ರಾಸ್ತ್ರಗಳು ಸೇರಿ ಹೆಚ್ಚುವರಿ ಸೇನಾ ನೆರವು ಮತ್ತು ಆರ್ಥಿಕ ನೆರವು ಕಲ್ಪಿಸುವುದಾಗಿ ಅಮೆರಿಕದ ಪ್ರತಿನಿಧಿಗಳು ಕೀವ್‌ನಿಂದ ವಾಪಸಾಗುವಾಗ ಉಕ್ರೇನ್‌ಗೆ ವಾಗ್ದಾನ ಮಾಡಿದರು. ಅಮೆರಿಕದ ಈ ಅಭೂತಪೂರ್ವ ನೆರವಿಗೆ ಝೆಲೆನ್‌ಸ್ಕಿ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಅಮೆರಿಕ, ‘ಉಕ್ರೇನ್‌ನಲ್ಲಿ ರಷ್ಯಾ ವಿಫಲವಾಗಿದೆ, ಅದು ನಿರೀಕ್ಷಿತ ವೇಗದಲ್ಲಿ ಮುನ್ನುಗ್ಗಲು ಸಾಧ್ಯವಾಗುತ್ತಿಲ್ಲ. ಉಕ್ರೇನ್‌ ಯುದ್ಧದಲ್ಲಿ ರಷ್ಯಾ ಸೇನಾಪಡೆಗಳ ಸಾಮರ್ಥ್ಯದ ಕೊರತೆಯೂ ಎದ್ದುಕಾಣಿಸಿದೆ’ ಎಂದು ಹೇಳಿದೆ.

‘ಅಜೋವ್‌ಸ್ಟಾಲ್‌ ಸುತ್ತ ಕದನವಿರಾಮ’

ಮಾಸ್ಕೊ (ಎಎಫ್‌ಪಿ): ಮರಿಯುಪೊಲ್‌ನ ಬೃಹತ್‌ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಸುರಂಗಗಳಲ್ಲಿ ಉಕ್ರೇನ್‌ ಪಡೆಗಳೊಂದಿಗೆ ಆಶ್ರಯ ಪಡೆದಿರುವ ನೂರಾರು ನಾಗರಿಕರ ಸ್ಥಳಾಂತರಕ್ಕಾಗಿ ಸ್ಥಾವರದ ಸುತ್ತಲೂ ರಷ್ಯಾ ಸೇನೆ ಸೋಮವಾರ ಕದನ ವಿರಾಮ ಘೋಷಿಸಿದೆ.

‘ಇದೇ ಏಪ್ರಿಲ್ 25ರಂದು ಮಧ್ಯಾಹ್ನ 2 ಗಂಟೆಗೆ (ಮಾಸ್ಕೊ ಸ್ಥಳೀಯ ಕಾಲಮಾನ) ಏಕಪಕ್ಷೀಯವಾಗಿ ಆಕ್ರಮಣ ಸ್ಥಗಿತಗೊಳಿಸಿದೆ. ಸೇನಾ ಪಡೆಗಳನ್ನು ದೂರಕ್ಕೆ ಕರೆಸಿಕೊಂಡು, ನಾಗರಿಕರ ಸುರಕ್ಷಿತ ಸ್ಥಳಾಂತರ ಖಾತ್ರಿಪಡಿಸಲಾಗುವುದು’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ನಾಗರಿಕರು ಬಯಸಿದ ದಿಕ್ಕುಗಳಿಗೆ ಅವರನ್ನು ಸ್ಥಳಾಂತರಿಸಬಹುದು. ಸ್ಥಳಾಂತರದ ಸಿದ್ಧತೆಯನ್ನು ಬಿಳಿ ಬಾವುಟ ತೋರಿಸುವ ಮೂಲಕ ಉಕ್ರೇನ್ ಅಧಿಕಾರಿಗಳು ಖಚಿತಪಡಿಸಬೇಕು. ಕದನ ವಿರಾಮದ ಮಾಹಿತಿಯನ್ನು ಅಜೋವ್‌ಸ್ಟಾಲ್‌ನ ರೇಡಿಯೊಗಳಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ತಿಳಿಸಲಾಗುತ್ತದೆ’ ಎಂದು ಅದು ಹೇಳಿದೆ. ಉಕ್ರೇನ್‌ ಇದನ್ನು ಅಲ್ಲಗಳೆದಿದೆ.

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

ಲಂಡನ್ (ರಾಯಿಟರ್ಸ್‌): ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಸದಂತೆ ಅಮೆರಿಕಕ್ಕೆ  ರಷ್ಯಾ ಕಠಿಣ ಎಚ್ಚರಿಕೆ ನೀಡಿದೆ.

‘ಅಮೆರಿಕದಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆ ಆಗುವುದನ್ನು ನಾವು ಸಹಿಸುವುದಿಲ್ಲ. ಇದನ್ನು ಕೊನೆಗೊಳಿಸಲು ಒತ್ತಾಯಿಸಿದ್ದೇವೆ. ಈ ಬಗ್ಗೆ ರಷ್ಯಾಕ್ಕಿರುವ ಕಳವಳದ ಬಗ್ಗೆಯೂ ಅಧಿಕೃತವಾದ ರಾಜತಾಂತ್ರಿಕ ಪತ್ರವನ್ನು ವಾಷಿಂಗ್ಟನ್‌ಗೆ ಕಳುಹಿಸಲಾಗಿದೆ’ ಎಂದು ವಾಷಿಂಗ್ಟನ್‌ನಲ್ಲಿ ಇರುವ ರಷ್ಯಾ ರಾಯಭಾರಿ ಅನಾಟೊಲಿ ಆಂಟೊನೊವ್, ರಷ್ಯಾದ ಸರ್ಕಾರಿ ಸ್ವಾಮ್ಯದ ‘ರೊಸ್ಸಿಯಾ 24 ಟಿ.ವಿ ಚಾನೆಲ್‌’ಗೆ ತಿಳಿಸಿದ್ದಾರೆ.

ಸೋಮವಾರದ ಬೆಳವಣಿಗೆ

l ಉಕ್ರೇನಿನ ಪ್ರಮುಖ ಐದು ರೈಲು ನಿಲ್ದಾಣಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನಾಗರಿಕರ ಸ್ಥಳಾಂತರಕ್ಕೆ ಅಡ್ಡಿಯಾಗಿದೆ– ಉಕ್ರೇನ್‌

l ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಗಡಿ ಬಳಿ ಹೊಡೆದುರುಳಿಸಲಾಗಿದೆ– ರಷ್ಯಾ ಸೇನೆ

l ಉಕ್ರೇನ್‌ ಮೇಲೆ ಮತ್ತೊಮ್ಮೆ ಇಸ್ಕಾಂಡರ್‌ ಕ್ಷಿಪಣಿಗಳನ್ನು ಬಳಸಿರುವ ವಿಡಿಯೊ ತುಣುಕನ್ನು ರಷ್ಯಾ ಸೇನೆ ಬಿಡುಗಡೆ ಮಾಡಿದೆ

l ರಷ್ಯಾ ಹೊಸ ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಂತೆ ಉಕ್ರೇನಿನಾದ್ಯಂತ ವಾಯು ದಾಳಿ ಸೈರನ್‌ ಮೊಳಗಿದವು. ವಿನಿಟ್ಸಿಯಾ ಮತ್ತು ಲುವಿವ್‌ ನಗರಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿ 5 ಮಂದಿ ಮೃತಪಟ್ಟಿದ್ದಾರೆ

l ರಷ್ಯಾದ ಬ್ರಿಯಾನ್‌ಸ್ಕ್ ನಗರದ ಬೃಹತ್‌ ತೈಲ ಸಂಗ್ರಹಣಾ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿದೆ – ರಷ್ಯಾದ ತುರ್ತು ಸೇವೆಗಳ ಸಚಿವಾಲಯದ ಮಾಹಿತಿ

l ವಾರದ ಹಿಂದೆ ರಷ್ಯಾದ ಸೇನಾ ಸಂಶೋಧನಾ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ

l ರಷ್ಯಾದ ಪಡೆಗಳು ರುಬಿನ್ಹೆ, ಪೊಪಾಸ್ನಾ, ಸಿವಿರೊಡೊನೆಟ್‌ಸ್ಕ್‌, ಮರಿಂಕಾ ಮತ್ತು ಅವ್ದೀಕಾದಲ್ಲಿ ರಕ್ಷಣೆ ಭೇದಿಸಲು ಯತ್ನಿಸಿದವು. ಇಝಿಮ್ ಪಟ್ಟಣದಿಂದ ಬಾರ್ವಿಂಕೋವ್ ಮತ್ತು ಸ್ಲೋವಿಯನ್‌ಸ್ಕ್‌ ಕಡೆಗೆ ಮುನ್ನುಗ್ಗಲು ಪ್ರಯತ್ನಿಸುತ್ತಿವೆ– ಉಕ್ರೇನ್‌ ರಕ್ಷಣಾ ಸಚಿವಾಲಯ  

l ರಷ್ಯಾದ ಪ್ರಮುಖ ಪತ್ರಕರ್ತರ ಹತ್ಯೆಗೆ ಪಾಶ್ಚಾತ್ಯ ರಾಷ್ಟ್ರಗಳು ರೂಪಿಸಿದ್ದ ಸಂಚನ್ನು ನಮ್ಮ ಬೇಹುಗಾರಿಕಾ ಸಂಸ್ಥೆ ವಿಫಲಗೊಳಿಸಿದೆ– ಅಧ್ಯಕ್ಷ ಪುಟಿನ್‌

l ಉಕ್ರೇನಿನ ಬುಚಾ ನಗರದಲ್ಲಿ ರಷ್ಯಾ ಪಡೆಗಳು ನಾಗರಿಕರ ಹತ್ಯೆಗೆ ಮೊದಲ ಮಹಾಯುದ್ಧದ ಅವಧಿಯ ಅಸ್ತ್ರಗಳನ್ನು ಪ್ರಯೋಗಿಸಿದೆ–ವೈದ್ಯರ ಹೇಳಿಕೆ ಉಲ್ಲೇಖಿಸಿ ‘ದಿ ಗಾರ್ಡಿಯನ್‌’ ಪತ್ರಿಕೆ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು