ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉಕ್ರೇನ್‌ ಯುದ್ಧ: ಫಲಿಸದ ಮಾತುಕತೆ

ಬೆಲರೂಸ್‌ನಲ್ಲಿನ ಮತ್ತೊಂದು ಸುತ್ತಿನ ಮಾತುಕತೆ lಫಲಿತಾಂಶದ ಮೇಲೆ ನಿಂತಿದೆ ಬಿಕ್ಕಟ್ಟು ಶಮನದ ಪ್ರಯತ್ನ
Last Updated 10 ಮಾರ್ಚ್ 2022, 21:10 IST
ಅಕ್ಷರ ಗಾತ್ರ

ಅಂಟಾಲಿಯ, ಟರ್ಕಿ: ಉಕ್ರೇನ್‌ ಮೇಲಿನ ರಷ್ಯಾಆಕ್ರಮಣದ ನಂತರ ಉಭಯ ರಾಷ್ಟ್ರಗಳ ನಡುವೆ ಗುರುವಾರ ಕದನ ವಿರಾಮ ಮತ್ತು ಇತರ ಮಾನವೀಯ ವಿಷಯಗಳ ಕುರಿತು ನಡೆದಮೊದಲ ಉನ್ನತ ಮಟ್ಟದ ಮಾತುಕತೆಯೂ ವಿಫಲವಾಗಿದೆ.

ಟರ್ಕಿಯ ಅಂಟಾಲಿಯ ನಗರದಲ್ಲಿ ರಾಜತಾಂತ್ರಿಕ ವೇದಿಕೆಯಲ್ಲಿ ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಮತ್ತು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಮಾತುಕತೆ ನಡೆಸಿದರು. ಆದರೆ, ಈ ಭೇಟಿಗೂ ಮೊದಲು ಪರಸ್ಪರ ಹಸ್ತಲಾಘವ ಮಾಡದೆ ಅಂತರ ಕಾಯ್ದುಕೊಂಡರು. ಈ ಸಭೆಯಲ್ಲಿ ಟರ್ಕಿ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಮತ್ತು ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಇದ್ದರು.

‘24 ಗಂಟೆಗಳ ಕದನ ವಿರಾಮದಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಈ ಬಗ್ಗೆ ನಿರ್ಧರಿಸಲು ರಷ್ಯಾದಲ್ಲಿ ಬೇರೆಯವರೇ ಇರುವಂತೆ ತೋರುತ್ತಿದೆ’ ಎಂದುಕುಲೇಬಾ ಹತಾಶೆ ವ್ಯಕ್ತಪಡಿಸಿದರು.

‘ಮಾಸ್ಕೊ ಕದನ ವಿರಾಮ ನೀಡಲು ಸಿದ್ಧವಿಲ್ಲ. ಅದು ಉಕ್ರೇನ್‌ನ ಶರಣಾಗತಿಯನ್ನು ಬಯಸುತ್ತಿದೆ. ಆದರೆ, ಇದು ಯಾವತ್ತಿಗೂಸಂಭವಿಸದು’ಎಂದು ಅವರು ಹೇಳಿದರು.

‘ಉಕ್ರೇನ್ ಶರಣಾಗಿಲ್ಲ. ಶರಣಾಗುವುದೂ ಇಲ್ಲ. ನಮ್ಮ ದೇಶವನ್ನು ಆಕ್ರಮಣಕಾರರಿಗೆ ಬಿಟ್ಟುಕೊಡಲ್ಲ ಎನ್ನುವ ಪ್ರತಿಜ್ಞೆಯನ್ನು ಮತ್ತೊಮ್ಮೆ ಹೇಳಲು ಬಯಸುವೆ’ ಎಂದರು.

ರಷ್ಯಾ ವಿದೇಶಾಂಗ ಸಚಿವರುತಮ್ಮ ಹಳೆಯ ವರಸೆಯನ್ನೇಮಾತುಕತೆಯ ಮೇಜಿಗೆ ತಂದಿದ್ದಾರೆ ಎಂದು ಆರೋಪಿಸಿದ ಕುಲೆಬಾ, ಈ ಸಭೆ ತುಂಬಾ ತ್ರಾಸದಾಯಕವಾಗಿತ್ತು. ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ದೂರಿದರು.

ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಗಂಭೀರ ಚರ್ಚೆ ನಡೆಸುವುದಾದರೆ ಲಾವ್ರೊವ್ ಅವರನ್ನು ಮತ್ತೊಮ್ಮೆ ಇದೇ ರೀತಿ ಭೇಟಿ ಮಾಡಲು ಸಿದ್ಧ ಎಂದು ಅವರು ಹೇಳಿದರು.

‘ಈ ಮಾತುಕತೆ ವೇಳೆ,ರಷ್ಯಾ ಪಡೆಗಳು ದಿಗ್ಬಂಧನ ವಿಧಿಸಿರುವ ನಗರ ಮರಿಯುಪೋಲ್‌ನಲ್ಲಿ ಮಾನವೀಯ ಕಾರಿಡಾರ್‌ ತೆರೆಯುವ ಒಪ್ಪಂದಕ್ಕೆ ಬರಲು ನಾನು ಬಯಸಿದ್ದೆ. ಆದರೆ, ದುರದೃಷ್ಟವಶಾತ್ ಸಚಿವ ಲಾವ್ರೊವ್ ಅದಕ್ಕೆ ಬದ್ಧರಾಗಿರಲಿಲ್ಲ’ ಎಂದು ಕುಲೆಬಾ ವಿಷಾದಿಸಿದರು.

ರಷ್ಯಾ ಪಡೆಗಳು ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿ ದಿಗ್ಬಂಧನ ವಿಧಿಸಿರುವ ನಗರಗಳಿಂದ ಉಕ್ರೇನ್‌ ನಾಗರಿಕರನ್ನು ಸುರಕ್ಷಿತವಾಗಿ ಹೊರತರಲು ನಾವು ಕೇಳುತ್ತಿರುವ ಮಾನವೀಯ ಕಾರಿಡಾರ್‌ಗಳ ಭರವಸೆಯನ್ನು ಹೊಸಕಿ ಹಾಕುವುದನ್ನು ಅವರು ಬಯಸುತ್ತಿದ್ದಾರೆ ಎಂದು ದೂರಿದರು.

ಬೆಲರೂಸ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದಂತೆ ಕಾಣಿಸಿದ ಲಾವ್ರೊವ್‌, ‘ಇಂದಿನ ಸಭೆಯು ಬೆಲರೂಸ್‌ನಲ್ಲಿನ ಮಾತುಕತೆಗೆ ಪರ್ಯಾಯವಲ್ಲ’ ಎಂದರು.

‘ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ನಾವು ಎಲ್ಲರೊಂದಿಗೂ ಮಾತುಕತೆಗೆ ಸಿದ್ಧ. ಆದರೆ, ಬೆಲರೂಸ್‌ನಲ್ಲಿ ನಡೆಯುವ ಮಾತುಕತೆಯ ಹಾದಿಯನ್ನು ಅದು ದುರ್ಬಲಗೊಳಿಸಬಾರದು, ಅದು ಮೌಲ್ಯಯುತವಾಗಿರಬೇಕೆನ್ನುವುದು ನಮ್ಮ ನಂಬಿಕೆ’ ಎಂದು ಲಾವ್ರೊವ್‌ ಹೇಳಿದರು.

ಯುರೋಪ್‌ ಒಕ್ಕೂಟ ಮತ್ತು ಇತರ ಪಾಶ್ಚಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಿ ಅಪಾಯಕಾರಿ ರೀತಿಯಲ್ಲಿ ಬೆಂಬಲಿಸುತ್ತಿವೆ ಎಂದು ಅವರು ಆರೋಪಿಸಿದರು.

ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳು ಬೆಲರೂಸ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆಗೆ ಭೇಟಿಯಾಗಲಿವೆ. ಆದರೆ, ರಷ್ಯಾದ ನಿಯೋಗದಲ್ಲಿ ಸಚಿವರು ಭಾಗಿಯಾಗುತ್ತಿಲ್ಲ, ತಳಮಟ್ಟದ ಅಧಿಕಾರಿಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT