ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ವಿಶ್ವಸಮರ ಸಾಧ್ಯತೆ: ರಷ್ಯಾ ಎಚ್ಚರಿಕೆ

ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳಿಂದ ಶಸ್ತ್ರಾಸ್ತ್ರ ಪೂರೈಕೆ; ನ್ಯಾಟೊದಿಂದ ಪರೋಕ್ಷ ಯುದ್ಧ
Last Updated 26 ಏಪ್ರಿಲ್ 2022, 18:26 IST
ಅಕ್ಷರ ಗಾತ್ರ

ಕೀವ್‌/ಮಾಸ್ಕೊ (ಎಪಿ/ಎಎಫ್‌ಪಿ): ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುತ್ತಿರುವುದರಿಂದ ನಿಜವಾಗಿಯೂ ಮೂರನೇ ವಿಶ್ವಸಮರ ನಡೆಯುವ ಅಪಾಯವಿದೆ ಎಂದು ರಷ್ಯಾ ಗಂಭೀರ ಎಚ್ಚರಿಕೆಯನ್ನು ಮಂಗಳವಾರ ನೀಡಿದೆ.

‘ಮೂರನೇ ವಿಶ್ವ ಸಮರಕ್ಕೆ ಪ್ರಚೋದಿಸಬೇಡಿ’ ಎಂದು ಉಕ್ರೇನ್‌ಗೂ ತಾಕೀತು ಮಾಡಿರುವ ರಷ್ಯಾದ ಉನ್ನತ ರಾಜತಾಂತ್ರಿಕರು, ‘ಅಣ್ವಸ್ತ್ರ ಸಂಘರ್ಷದ ಅಪಾಯವನ್ನೂ ಲಘುವಾಗಿ ಪರಿಗಣಿಸಬೇಡಿ’ ಎಂದು ಎಚ್ಚರಿಸಿದ್ದಾರೆ.

ಅಮೆರಿಕ ಆಹ್ವಾನದ ಮೇರೆಗೆ 40 ದೇಶಗಳು ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ಸೇರುವುದಕ್ಕೂ ಮೊದಲು ರಷ್ಯಾ ಮತ್ತೊಮ್ಮೆ ಈ ಕಠಿಣ ಸಂದೇಶ ನೀಡಿದೆ.

ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿರುವರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್, ‘ಶಾಂತಿ ಚರ್ಚೆಯನ್ನು ಉಕ್ರೇನ್‌ ವಿಫಲಗೊಳಿಸುತ್ತಿದೆ. ಮೂರನೇ ಮಹಾಯುದ್ಧ ಆರಂಭದ ಅಪಾಯ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ’ ಎಂದರು.

‘ಈ ಸಂಘರ್ಷದಲ್ಲಿ ಭಾಗಿಯಾಗುವಂತೆ ನ್ಯಾಟೊವನ್ನು ಕೇಳುವ ಮೂಲಕಉಕ್ರೇನ್‌, ರಷ್ಯಾವನ್ನು
ಪ್ರಚೋದಿಸುತ್ತಿದೆ. ನ್ಯಾಟೊ ನಮ್ಮ ವಿರುದ್ಧ ಪರೋಕ್ಷ ಯುದ್ಧ ನಡೆಸುತ್ತಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಉಕ್ರೇನ್‌ಗೆ ಪೂರೈಕೆ ಆಗುತ್ತಿರುವ
ಶಸ್ತ್ರಾಸ್ತ್ರಗಳ ನಾಶವೇ ನಮ್ಮ ಗುರಿ’ ಎಂದು ಲಾವ್ರೊವ್‌ ಹೇಳಿದರು.

‘ರಷ್ಯಾ ಸೇನೆ ದುರ್ಬಲಗೊಳಿಸುವುದು ನಮ್ಮ ನಿಲುವು’ ಎಂದುಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಲಾವ್ರೊವ್‌,‘ಉಕ್ರೇನ್‌ನಲ್ಲಿ ಯುದ್ಧ ಮುಂದುವರಿಕೆ ಪಾಶ್ಚಾತ್ಯ ರಾಷ್ಟ್ರಗಳ ಬಯಕೆ. ರಷ್ಯಾ ಸೇನೆ ದಣಿದಿದೆ ಎಂದು ಅವು ಭಾವಿಸಿವೆ. ಇದು ಭ್ರಮೆ’ ಎಂದಿದ್ದಾರೆ.

‘ಉಕ್ರೇನ್‌ಗೆ ಸಿಕ್ಕಿರುವ ಜಗತ್ತಿನ ಬೆಂಬಲ ನೋಡಿ ರಷ್ಯಾ ತನ್ನ ಕೊನೆ ಭರವಸೆಯನ್ನೂ ಕಳೆದುಕೊಂಡಿದೆ. ಹಾಗಾಗಿ ಮೂರನೇ ವಿಶ್ವಸಮರದ‌ ಬಗ್ಗೆ ಮಾತನಾಡುತ್ತಿದೆ.ಇದರರ್ಥ ರಷ್ಯಾ ಸೋಲು ಕಾಣಲಿದೆ’ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಟ್ವೀಟ್‌ ಮಾಡಿದ್ದಾರೆ.

ಅಣು ಸ್ಥಾವರದ ಮೇಲೆ ಹಾರಿದ ಕ್ಷಿಪಣಿ

ಝಪೊರಿಝಿಯಾ (ರಾಯಿಟರ್ಸ್‌/ಎಎಫ್‌ಪಿ): ಉಕ್ರೇನಿನ ಝಪೊರಿ ಝಿಯಾದಲ್ಲಿರುವ ಯುರೋಪಿನ ಅತ್ಯಂತ ದೊಡ್ಡ ಅಣು ವಿದ್ಯುತ್‌ ಸ್ಥಾವರದ ಮೇಲೆ ರಷ್ಯಾದ ಕ್ಷಿಪಣಿಗಳುಕಡಿಮೆ ಎತ್ತರದಲ್ಲಿ ಹಾರಿ ಹೋಗಿವೆ ಎಂದು ಉಕ್ರೇನಿನ ಅಣುಶಕ್ತಿ ಕಂಪನಿ ಎನರ್‌ಗೋಟಮ್‌ ಮುಖ್ಯಸ್ಥ ಪೆಟ್ರೋ ಕೊಟಿನ್ಮಂಗಳವಾರ ತಿಳಿಸಿದ್ದಾರೆ.

‘ಈ ಸ್ಥಾವರದಲ್ಲಿರುವ ಏಳು ಘಟಕಗಳಲ್ಲಿ ಒಂದು ‌ಅಥವಾ ಹೆಚ್ಚಿನ ಘಟಕಗಳಿಗೆ ಕ್ಷಿಪಣಿ ನೇರವಾಗಿ ಅಪ್ಪಳಿಸಿದ್ದರೆ, ಮತ್ತೊಂದು ದೊಡ್ಡ ಅಣು ದುರಂತ ಸಂಭವಿಸುತ್ತಿತ್ತು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಉಕ್ರೇನ್‌ಗೆ ಭಾರಿ ಶಸ್ತ್ರಾಸ್ತ್ರಗಳ ನೆರವು’

ಉಕ್ರೇನ್‌ಗೆ ಭಾರಿ ಶಸ್ತ್ರಾಸ್ತ್ರಗಳ ಹೊಸ ಪ್ಯಾಕೇಜ್‌ ನೀಡಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳುಮಂಗಳವಾರ ಜರ್ಮನಿಯ ರಾಮ್‌ಸ್ಟೈನ್‌ ವಾಯುನೆಲೆಯಲ್ಲಿ ನಡೆದ ಭದ್ರತಾ ಶೃಂಗಸಭೆಯಲ್ಲಿ ವಾಗ್ದಾನ ಮಾಡಿದವು.

ಉಕ್ರೇನ್‌ ಬೆಂಬಲಿಸಿದರೆ ಅಣ್ವಸ್ತ್ರ ಯುದ್ಧಕ್ಕೆ ದಾರಿಯಾಗಲಿದೆ ಎಂಬ ರಷ್ಯಾದ ಬೆದರಿಕೆಯನ್ನು ತಳ್ಳಿಹಾಕಿದವು.

‘ರಷ್ಯಾದ ಆಕ್ರಮಣದ ವಿರುದ್ಧ ಗೆಲುವು ಸಾಧಿಸಲು ಉಕ್ರೇನ್‌ಗೆ ಎಲ್ಲ ನೆರವು ನೀಡಲು 40ಕ್ಕೂ ಹೆಚ್ಚು ದೇಶಗಳು ಐತಿಹಾಸಿಕ ಸಭೆ ಸೇರಿವೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಜೆ. ಆಸ್ಟಿನ್‌ ತಿಳಿಸಿದರು.

‘ಉಕ್ರೇನ್‌ನ ಅಲ್ಪಾವಧಿ ಮತ್ತು ದೀರ್ಘಾವಧಿ ಭದ್ರತಾ ಅಗತ್ಯ ಖಾತ್ರಿಪಡಿಸುವ ಸಮಾನ, ಪಾರದರ್ಶಕ ಒಪ್ಪಂದಕ್ಕೆ ಬರುವುದು ಈ ಸಭೆಯ ಗುರಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT