ಬುಧವಾರ, ನವೆಂಬರ್ 30, 2022
16 °C

ತಮಗಿದ್ದ ಭಾರಿ ಭದ್ರತೆಯ ಬಗ್ಗೆ ಹಿಂದೊಮ್ಮೆ ಅಸಮಾಧಾನ ಹೊರಹಾಕಿದ್ದ ಸಲ್ಮಾನ್ ರಶ್ದಿ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ದಾಳಿಗೊಳಗಾಗಿ, ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಸಲ್ಮಾನ್ ರಶ್ದಿ ಈ ಹಿಂದೆ ತಮ್ಮ ಸುತ್ತಲೂ ಇದ್ದ ಭಾರಿ ಭದ್ರತೆಯ ಬಗ್ಗೆಯೇ ದೂರಿದ್ದರು ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ:  

‘ದಿ ಸೈಟಾನಿಕ್‌ ವೆರ್ಸೆಸ್‌’ ಕೃತಿ ರಚನೆಯ ನಂತರ ಸಲ್ಮಾನ್‌ ರಶ್ದಿ ಅವರಿಗೆ ಇಸ್ಲಾಮಿಕ್‌ ಗುಂಪುಗಳಿಂದ ಹಲವು ವರ್ಷಗಳ ಕಾಲ ಜೀವ ಬೆದರಿಕೆ ಇತ್ತು.

ಪಶ್ಚಿಮ ನ್ಯೂಯಾರ್ಕ್‌ನ ಷಟೌಕ್ವಾ ಇನ್‌ಸ್ಟಿಟ್ಯೂಟ್‌ ಶುಕ್ರವಾರ ಆಯೋಜಿಸಿದ್ದ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು. ರಶ್ದಿ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ವೇದಿಕೆಗೆ ನುಗ್ಗಿದ ನ್ಯೂಜೆರ್ಸಿ ಮೂಲದ 24 ವರ್ಷದ ಹದಿ ಮಾತರ್‌ ಎಂಬಾತ ರಶ್ದಿ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಶ್ದಿ ನೆಲಕ್ಕೆ ಕುಸಿದುಬಿದ್ದಿದ್ದರು.

ರಕ್ತದ ಮಡುವಿನಲ್ಲಿದ್ದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ತಮ್ಮ ಸುತ್ತಲೂ ಹೆಚ್ಚಿನ ಭದ್ರತೆ ನಿಯೋಜಿಸಿದ್ದ ಬಗ್ಗೆ 2001 ರಲ್ಲಿ ರಶ್ದಿ ಅವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಅಂದು, ‘ಪ್ರೇಗ್ ರೈಟರ್ಸ್ ಫೆಸ್ಟಿವಲ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ರಶ್ದಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಇಲ್ಲಿ ಇರಲು ಮತ್ತು ನನ್ನ ಸುತ್ತಲೂ ಇರುವ ಭಾರೀ ಪ್ರಮಾಣದ ಭದ್ರತೆಯನ್ನು ನೋಡಲು ನನಗೆ ಸ್ವಲ್ಪ ಮುಜುಗರವಾಗುತ್ತಿದೆ. ಇದು ನಿಜವಾಗಿಯೂ ಅನಗತ್ಯ ಮತ್ತು ವಿಪರೀತ ಎಂದು ನಾನು ಭಾವಿಸಿದ್ದೇನೆ. ಈ ಭದ್ರತೆಯನ್ನು ನನ್ನ ಕೋರಿಕೆಯ ಮೇರೆಗಂತೂ ಖಂಡಿತಾ ವ್ಯವಸ್ಥೆ ಮಾಡಿಲ್ಲ’ ಎಂದು ರಶ್ದಿ ಹೇಳಿದ್ದರು.

‘ನಾನು ಇಲ್ಲಿಗೆ ಬರುವ ಮೊದಲು ಭದ್ರತೆಯ ಕಾರಣಕ್ಕೆ ಸಾಕಷ್ಟು ಸಮಯ ವ್ಯರ್ಥವಾಗಿದೆ. ಸಮಯ ಹಾಳಾದಂತೆ ನನಗೆ ಭಾಸವಾಗುತ್ತಿದೆ. ನಾನು ಹಲವಾರು ವರ್ಷಗಳಷ್ಟು ಹಿಂದೆ ಹೋಗಿದ್ದೇನೆ ಎನಿಸುತ್ತಿದೆ’ ಎಂದು ಅವರು ಹೇಳಿದ್ದರು.

ಶುಕ್ರವಾರ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ದಾಳಿಯ ವೇಳೆ ರಶ್ದಿ ಅವರ ಕುತ್ತಿಗೆಗೆ ಇರಿಯಲಾಗಿದೆ. ಈ ದಾಳಿಯ ಹಿನ್ನೆಲೆಯಲ್ಲಿ ರಶ್ದಿ ಅವರಿಗೆ ಇದ್ದ ಭದ್ರತೆ ಬಗ್ಗೆ ಈಗ ಅನುಮಾನಗಳು ಎದ್ದಿವೆ.

ಶುಕ್ರವಾರದ ಕಾರ್ಯಕ್ರಮಕ್ಕೆ ಬರುವವರ ಬ್ಯಾಗುಗಳ ತಪಾಸಣೆ ಮತ್ತು ಮೆಟಲ್ ಡಿಟೆಕ್ಟರ್‌ಗಳು ಸೇರಿದಂತೆ ಮೂಲಭೂತ ಭದ್ರತಾ ಕ್ರಮಗಳ ಶಿಫಾರಸುಗಳನ್ನು ಷಟೌಕ್ವಾ ಸಂಸ್ಥೆ ತಿರಸ್ಕರಿಸಿತ್ತು. ಭದ್ರತಾ ಕ್ರಮಗಳ ಕಾರಣಕ್ಕೆ ಅತಿಥಿಗಳು ಮತ್ತು ಪ್ರೇಕ್ಷಕರ ನಡುವೆ ಅಂತರ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಶಿಫಾರಸು ತಿರಸ್ಕರಿಸಲಾಗಿತ್ತು ಎನ್ನಲಾಗಿದೆ. ಸುದ್ದಿ ಮಾಧ್ಯಮ ಸಿಎನ್‌ಎನ್‌ನೊಂದಿಗೆ ಮಾತನಾಡಿರುವ ಎರಡು ಮೂಲಗಳು ಈ ವಿಷಯ ತಿಳಿಸಿವೆ.

ಭದ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಸಂಸ್ಥೆಯಲ್ಲಿ ಪಾಲಿಸಿಕೊಂಡು ಬಂದಿರುವ ಸಂಸ್ಕೃತಿಗೆ ಹಾನಿಯಾಗಬಹುದು ಎಂದೂ ಆಡಳಿತ ಮಂಡಳಿ ಯೋಚಿಸಿತ್ತು ಎನ್ನಲಾಗಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು