ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದರ್ ಸತ್ತಿಲ್ಲ: ತಾಲಿಬಾನ್ ಸ್ಪಷ್ಟನೆ

Last Updated 14 ಸೆಪ್ಟೆಂಬರ್ 2021, 16:28 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನ್‌ ಮುಖಂಡ ಮುಲ್ಲಾ ಅಬ್ದುಲ್ ಘನಿ ಬರದರ್ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ತಾಲಿಬಾನ್ ಮಂಗಳವಾರ ಅಲ್ಲಗಳೆದಿದೆ.

ಕಳೆದ ವಾರ ಅಫ್ಗನ್ ಸರ್ಕಾರದ ಉಪಪ್ರಧಾನಿ ಹುದ್ದೆಗೆ ಹೆಸರಿಸಲಾಗಿದ್ದ ಬರದರ್, ವಿರೋಧಿಗಳ ಮಧ್ಯೆ ನಡೆದಿದೆ ಎನ್ನಲಾದ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಸಂಘರ್ಷದಲ್ಲಿ ಹತ್ಯೆಯಾಗಿರುವ ಅಥವಾ ಗಾಯಗೊಂಡಿರುವ ಸುದ್ದಿಯನ್ನು ಬರದರ್ ಅಲ್ಲಗಳೆದಿದ್ದು, ಧ್ವನಿ ಸಂದೇಶ ಕಳುಹಿಸಿದ್ದಾರೆ ಎಂದು ತಾಲಿಬಾನ್ ವಕ್ತಾರ ಸುಲೇಲ್ ಶಹೀನ್ ತಿಳಿಸಿದ್ದು,ಹತ್ಯೆ ಸುದ್ದಿ ಸುಳ್ಳು ಮತ್ತು ಆಧಾರವಿಲ್ಲದ್ದು ಎಂದು ಟ್ವೀಟ್ ಮಾಡಿದ್ದಾರೆ.

ಕಂದಹಾರ್‌ನಲ್ಲಿ ಬರದರ್ ಸಭೆ ನಡೆಸುತ್ತಿರುವ ವಿಡಿಯೊವೊಂದನ್ನೂ ಸಹ ತಾಲಿಬಾನ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಹಖ್ಖಾನಿ ಸಂಘಟನೆ ಮುಖ್ಯಸ್ಥ ಸಿರಾಜುದ್ದೀನ್ ಹಖ್ಖಾನಿ ಮತ್ತು ಬರದರ್ ಬೆಂಬಲಿಗರ ನಡುವೆ ಪಾಕಿಸ್ತಾನದ ಗಡಿಯಲ್ಲಿ ಸಂಘರ್ಷ ನಡೆದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.

ಉಗ್ರಗಾಮಿ ಸಂಘಟನೆಯ ಕಮಾಂಡರ್ ಆಗಿರುವ ಹಖ್ಖಾನಿ ಹಾಗೂ ದೋಹಾದ ರಾಜಕೀಯ ಕಚೇರಿ ಮೂಲಕ ಅಮೆರಿಕದ ಜೊತೆ ಒಪ್ಪಂದ ಮಾಡಿಕೊಂಡ ಬರದರ್ ಮೊದಲಾದ ಮುಖಂಡರ ನಡುವೆ ವೈರತ್ವ ಮೂಡಿದೆ ಎನ್ನುವ ವರದಿಗಳಿಂದಾಗಿ ಗುಂಡಿನ ಕಾಳಗದ ವದಂತಿ ಹಬ್ಬಿತ್ತು.

ಆದರೆ ಆಂತರಿಕ ಸಂಘರ್ಷ ನಡೆಯುತ್ತಿದೆ ಎಂಬ ಅಂಶವನ್ನು ತಾಲಿಬಾನ್ ಪದೇ ಪದೇ ಅಲ್ಲಗಳೆಯುತ್ತಾ ಬಂದಿದೆ.

ತಾಲಿಬಾನ್ ಸರ್ಕಾರದ ನೇತೃತ್ವ ವಹಿಸಲಿದ್ದಾರೆ ಎಂದು ಬಿಂಬಿತವಾಗಿದ್ದ ಬರದರ್, ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಕತಾರ್ ವಿದೇಶಾಂಗ ಸಚಿವ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ಥಾನಿ ಅವರನ್ನು ಭಾನುವಾರ ಭೇಟಿ ಮಾಡಿದ ಸಚಿವರ ನಿಯೋಗದಲ್ಲಿಯೂ ಇರಲಿಲ್ಲ.

ತಾಲಿಬಾನ್‌ನ ಪರಮೋಚ್ಚ ನಾಯಕ ಮುಲ್ಲಾ ಹೈಬತ್‌ ಉಲ್ಲಾಅಖುಂಜಾದಾ ಸಹ ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ ಕಳೆದ ವಾರ ಸರ್ಕಾರ ರಚನೆ ವೇಳೆ ಹೇಳಿಕೆ ಬಿಡುಗಡೆ ಮಾಡಿದ್ದ. ಸಂಘಟನೆಯ ಸ್ಥಾಪಕ ಮುಲ್ಲಾ ಒಮರ್ 2013ರಲ್ಲಿ ಹತ್ಯೆಯಾಗಿದ್ದರೂ, ಅದಾದ ಎರಡು ವರ್ಷಗಳ ನಂತರ ಸುದ್ದಿ ಖಚಿತಪಟ್ಟಿತ್ತು.

ಕಾಲೊನಿ ತೆರವು: ಪ್ರತಿಭಟನೆ

ಕಂದಹಾರ್: ಇಲ್ಲಿನ ಸೇನಾ ಕಾಲೊನಿ ತೆರವು ಮಾಡುವಂತೆ ತಾಲಿಬಾನ್ ಸೂಚಿಸಿರುವುದನ್ನು ಖಂಡಿಸಿ ಸಾವಿರಾರು ಅಫ್ಗನ್ನರು ಗವರ್ನರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸುಮಾರು 30 ವರ್ಷಗಳಿಂದ ವಾಸಿಸುತ್ತಿರುವ 3000 ಕುಟುಂಬಗಳಿಗೆ ಮೂರು ದಿನದೊಳಗೆ ಕಾಲೊನಿ ತೆರವು ಮಾಡುವಂತೆ ಸೂಚಿಸಲಾಗಿತ್ತು. ಇದನ್ನು ಖಂಡಿಸಿ ರಸ್ತೆಗಿಳಿದ ಜನರು ರಸ್ತೆ ತಡೆ ನಡೆಸಿದರು ಎಂದು ಮಾಜಿ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ರಸ್ತೆಯನ್ನು ಬಂದ್ ಮಾಡಿರುವ ದೃಶ್ಯಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

ಅಫ್ಗನ್ ಭದ್ರತಾಪಡೆಗಳ ನಿವೃತ್ತ ಸೇನಾ ಜನರಲ್‌ಗಳು ಹಾಗೂ ಇತರ ಅಧಿಕಾರಿಗಳು ಈ ಕಾಲೊನಿಗಳಲ್ಲಿ ವಾಸಿಸುತ್ತಿದ್ದಾರೆ. ತೆರವು ವಿಚಾರದ ಬಗ್ಗೆ ತಾಲಿಬಾನ್ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT