ಶನಿವಾರ, ಜೂನ್ 25, 2022
24 °C

ಅಫ್ಗಾನಿಸ್ತಾನದಲ್ಲಿನ ತಾಲಿಬಾನ್ ಹೋರಾಟ ಪಾಕಿಸ್ತಾನದ ಪರೋಕ್ಷ ಯುದ್ಧ: ಮೊಹಿಬ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕಾಬೂಲ್‌:‌ ಅಫ್ಗಾನಿಸ್ತಾನದಲ್ಲಿ ಪಾಕಿಸ್ತಾನದ ಅಘೋಷಿತ ಪ್ರಾಕ್ಸಿ (ಪರೋಕ್ಷ) ಕದನವನ್ನು ತಾಲಿಬಾನ್ ಮುಂದುವರಿಸುತ್ತಿದೆ ಎಂದು ಅಫ್ಗನ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್‌ದುಲ್ಲಾ ಮೊಹಿಬ್‌ ಹೇಳಿದ್ದಾರೆ.

ಅಫ್ಗನ್‌ ಅಧ್ಯಕ್ಷ ಅಶ್ರಫ್‌ ಘನಿ ಅವರಿಗೆ ಭದ್ರತಾ ಸಲಹೆಗಾರನಾಗಿರುವ ಮೊಹಿಬ್‌, ತಾಲಿಬಾನ್‌ ಸಂಘಟನೆಯೊಂದಿಗೆ ಅದರ ನಾಯಕ ಹಿಬಾತುಲ್ಲಾ ಅಖುಂದ್‌ಜಾಡ ಯಾವುದೇ ಸಭೆ ನಡೆಸಿಲ್ಲ ಎಂದಿದ್ದಾರೆ.

ʼಕಳೆದ 12 ತಿಂಗಳುಗಳಿಂದ ಆತನ (ಹಿಬಾತುಲ್ಲಾ) ಬಗ್ಗೆ ಯಾವುದೇ ಸುದ್ದಿ ಇಲ್ಲ. ಅದೇ ರೀತಿ ಅಷ್ಟು ದಿನಗಳಿಂದ ತಾಲಿಬಾನ್‌ಗೂ ಆತನ ಬಗ್ಗೆ ಮಾಹಿತಿ ಇಲ್ಲ. ಆತ ಬದುಕಿದ್ದಾನೋ? ಇಲ್ಲವೋ? ಎಂಬುದನ್ನು ಮೊದಲು ತಿಳಿಯಬೇಕು. ಯಾರೂ ಆತನನ್ನು ನೋಡಿಲ್ಲ ಎಂಬುದನ್ನು ಗುಪ್ತಚರ ಇಲಾಖೆಯೂ ಖಚಿತಪಡಿಸಿದೆ. ಆತ ಎಲ್ಲಿದ್ದಾನೆ ಎಂಬುದಕ್ಕೆ ತಾಲಿಬಾನ್‌ ಉತ್ತರಿಸಬೇಕುʼ ಎಂದು ಅವರು ಹೇಳಿದ್ದಾರೆ.

ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಕಳೆದ ತಿಂಗಳ ಆರಂಭದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೊಹಿಬ್‌, ಪಾಕಿಸ್ತಾನ ಒಂದು ʼವೇಶ್ಯಾಗೃಹʼ ಇದ್ದಂತೆ ಎಂದು ಕಿಡಿ ಕಾರಿದ್ದರು. ಇದರಿಂದ ಕೆರಳಿದ್ದ ಇಸ್ಲಾಮಾಬಾದ್‌ ನಾಯಕರು, ಅಂತರರಾಷ್ಟ್ರೀಯ ಸಂವಹನದ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿದ್ದಾರೆ ಎಂದು ಮೊಹಿಬ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾದ ಬಳಿಕ ಅಫ್ಗಾನ್‌ ಮತ್ತು ಪಾಕ್‌ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಕಟವಾಗಿದ್ದ ವರದಿಗಳನ್ನುದ್ದೇಶಿಸಿ ಮೊಹಿಬ್‌ ಮಾತನಾಡಿದ್ದಾರೆ.

ಅದರಂತೆ ಅವರು, ಪಾಕಿಸ್ತಾನ ಮತ್ತು ಅದರ ಗುಪ್ತಚರ ದಳವು ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಅದನ್ನು ಪಾಕ್‌ ನಿರಾಕರಿಸಿದೆ ಎಂದು ವಾಯ್ಸ್‌ ಆಫ್‌ ಅಮೆರಿಕ ವರದಿ ಮಾಡಿದೆ.

ಅಫ್ಗಾನಿಸ್ತಾನದಾದ್ಯಂತ ಭದ್ರತಾ ಪಡೆಗಳು ಮತ್ತು ತಾಲಿಬಾನ್ ನಡುವೆ ತೀವ್ರ ಹೋರಾಟ ನಡೆಯುತ್ತಿದೆ.

ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಅಹ್ಮದ್‌ ಜಿಯಾ ಸರಜ್‌ ಅವರು, ಕಳೆದ ವಾರ ತಾಲಿಬಾನ್‌ ಪಾಲಿಗೆ ಮಾರಕವಾಗಿದ್ದು, ಸಾವಿರಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಮೃತಪಟ್ಟಿರುವುದು ತಾಲಿಬಾನ್‌ ನಾಯಕತ್ವದಲ್ಲಿ ಒತ್ತಡ ಸೃಷ್ಟಿಸಿದೆ ಎಂದೂ ಅಭಿಪ್ರಾಯಪಟ್ಟಿದ್ದರು.

ಆದಾಗ್ಯೂ, ಈ ಹೇಳಿಕೆ ಅಲ್ಲಗಳೆದಿರುವ ತಾಲಿಬಾನ್‌ ಸಂಘಟನೆ ವಕ್ತಾರ ಜಬಿಉಲ್ಲಾ ಮುಜಾಹಿದ್‌, ಅಫ್ಗನ್‌ ಅಧಿಕಾರಿಗಳ ಹೇಳಿಕೆಯು ʼಆಧಾರ ರಹಿತ ಮತ್ತು ಸುಳ್ಳುʼ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು