7 ತಿಂಗಳ ಬಳಿಕ ತೆರೆದ ಬಾಲಕಿಯರ ಪ್ರೌಢಶಾಲೆ, ಮತ್ತೆ ಮುಚ್ಚುವಂತೆ ತಾಲಿಬಾನ್ ಆದೇಶ

ಕಾಬುಲ್: ಅಫ್ಗಾನಿಸ್ತಾನದಲ್ಲಿ ಬಾಲಕಿಯರ ಪ್ರೌಢಶಾಲೆಗಳು ಪುನಃ ತೆರೆದ ಕೆಲವೇ ಗಂಟೆಗಳ ನಂತರ ಮತ್ತೆ ಶಾಲೆಗಳನ್ನು ಮುಚ್ಚುವಂತೆ ಬುಧವಾರ ತಾಲಿಬಾನ್ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಬಾಲಕಿಯರು ಮನೆಗೆ ತೆರಳಲು ಸೂಚಿಸಿರುವ ವರದಿಗಳು ನಿಜವೇ ಎಂದು ಪ್ರಶ್ನಿಸಿದ ಎಎಫ್ಪಿಗೆ ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿ, 'ಹೌದು ಇದು ನಿಜ' ಎಂದಿದ್ದಾರೆ.
ಎಎಫ್ಪಿ ತಂಡವೊಂದು ರಾಜಧಾನಿ ಕಾಬೂಲ್ನ ಜರ್ಘೋನಾ ಪ್ರೌಢಶಾಲೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಶಿಕ್ಷಕರೊಬ್ಬರು ತರಗತಿಗೆ ಬಂದು ಎಲ್ಲ ವಿದ್ಯಾರ್ಥಿನಿಯರೂ ಮನೆಗೆ ಹೋಗುವಂತೆ ಸೂಚಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಪಡಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಶಾಲೆಗಳನ್ನು ತೆರೆಯಲಾಗಿತ್ತು. ಆದರೆ ಮತ್ತೆ ಶಾಲೆ ಮುಚ್ಚುವಂತೆ ಆದೇಶ ಹೊರಬೀಳುತ್ತಿದ್ದಂತೆ ವಿದ್ಯಾರ್ಥಿನಿಯರು ಕಣ್ಣೀರಾಕುತ್ತಾ ತಮ್ಮ ವಸ್ತುಗಳನ್ನು ಎತ್ತಿಟ್ಟುಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಹಲವಾರು ರಾಷ್ಟ್ರಗಳು ಮತ್ತು ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಲು ಮುಂದಾಗುವುದರೊಂದಿಗೆ, ಹೊಸ ತಾಲಿಬಾನ್ ಆಡಳಿತದೊಂದಿಗಿನ ಮಾತುಕತೆಗಳಲ್ಲಿ ಅಂತರರಾಷ್ಟ್ರೀಯ ಸಮುದಾಯವು ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡುವಂತೆ ಒತ್ತಾಯಿಸಿದೆ.
ಶಾಲೆಗಳನ್ನು ಪುನಃ ತೆರೆಯುವುದು ಯಾವಾಗಲೂ ಸರ್ಕಾರದ ಉದ್ದೇಶವಾಗಿದೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ತಾಲಿಬಾನ್ ತಲೆಬಾಗುವುದಿಲ್ಲ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
'ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ನಮ್ಮ ಜವಾಬ್ದಾರಿಯ ಭಾಗವಾಗಿ ನಾವು ಇದನ್ನು ಮಾಡುತ್ತಿದ್ದೇವೆ' ಎಂದು ಸಚಿವಾಲಯದ ವಕ್ತಾರ ರಾಯನ್ ಎಎಫ್ಪಿಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.