ಅದಾನಾ, ಅಂಟಾಕ್ಯಾ (ಟರ್ಕಿ) (ಎಪಿ/ಎಎಫ್‌ಪಿ): ಭೀಕರ ಭೂಕಂಪದಿಂದ ಭಾರಿ ಹಾನಿಯಾಗಿರುವ ಟರ್ಕಿಯಲ್ಲಿ ದುರಂತ ನಡೆದ 11ನೇ ದಿನ ಅಂಟಾಕ್ಯಾ ನಗರದಲ್ಲಿ ಅವಶೇಷಗಳಡಿ ಸಿಲುಕಿದ್ದ 14 ವರ್ಷದ ಒಬ್ಬ ಬಾಲಕ, ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರನ್ನು ಶುಕ್ರವಾರ ರಕ್ಷಿಸಲಾಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಫೆ.6ರಂದು 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ದುರಂತ ಸಂಭವಿಸಿದ 260 ಗಂಟೆಗಳ ನಂತರ, ಓಸ್ಮನ್ ಎಂಬ ಬಾಲಕನನ್ನು ರಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಹತಾಯ್ ಪ್ರಾಂತ್ಯದ ಅಂಟಾಕ್ಯಾದ ಆಸ್ಪತ್ರೆಗೆ ಬಾಲಕನನ್ನು ಸ್ಟ್ರೆಚರ್ ಮೇಲೆ ಕರೆಯೊಯ್ಯುತ್ತಿರುವ ಚಿತ್ರವನ್ನು ಸಚಿವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರ ತಡರಾತ್ರಿ ಕುಸಿದ ಕಟ್ಟಡದಿಂದ 17 ಶವಗಳನ್ನು ಹೊರತೆಗೆಯುವಾಗ ರಕ್ಷಣಾ ಸಿಬ್ಬಂದಿಗೆ, ಅದೇ ಕಟ್ಟಡದಲ್ಲಿ ಬಾಲಕ ಜೀವಂತವಿರುವ ಸುಳಿವು ಸಿಕ್ಕಿತ್ತು. ಅವಶೇಷಗಳಡಿ ಕೇಳಿಸುತ್ತಿದ್ದ ಶಬ್ದದ ಜಾಡು ಹಿಡಿದು, ಬಾಲಕನನ್ನು ರಕ್ಷಿಸಲಾಯಿತು. ಇದಾದ ಒಂದು ತಾಸಿನಲ್ಲಿ ಅದೇ ಕಟ್ಟಡದ ಅವಶೇಷಗಳಡಿಯಿಂದ 26 ವರ್ಷದ ಯುವಕ ಮೆಹ್ಮೆಟ್ ಅಲಿ ಸಕಿರೊಗ್ಲು ಮತ್ತು 33 ವರ್ಷದ ಮುಸ್ತಾಫಾ ಅವ್ಸಿ ಎಂಬುವವರನ್ನು ಸುರಕ್ಷಿತವಾಗಿ ಹೊರತರಲಾಯಿತು ಎಂದು ‘ದಿ ಡಿಎಚ್‌ಎ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಹ್ರಾಮನ್ಮರಸ್‌ನಲ್ಲಿ ಕಟ್ಟಡದ ಅವಶೇಷಗಡಿ ಸಿಲುಕಿದ್ದ ಎರಡು ಮಕ್ಕಳ ತಾಯಿ, 29 ವರ್ಷದ ನೆಸ್ಲಿಹಾನ್ ಕಿಲಿಕ್ ಅವರನ್ನು ದುರಂತ ನಡೆದ 258 ಗಂಟೆಗಳ ನಂತರ ಗುರುವಾರ ತಡರಾತ್ರಿ ರಕ್ಷಿಸಲಾಯಿತು. ಫೋರ್ಕ್ಲಿಫ್ಟ್ ಆಪರೇಟರ್, ಅವಶೇಷಗಳಿಂದ ಆವರಿಸಿದ್ದ ಹಾಸಿಗೆ ಎತ್ತಿದಾಗ ಮಹಿಳೆಯ ಕೈ ಚಲನೆಯನ್ನು ಗಮನಿಸಿ ರಕ್ಷಿಸಲಾಯಿತು. ಮಗಳು ಬದುಕಿರುವ ನಿರೀಕ್ಷೆಯಲ್ಲಿ ಆಕೆಯ ತಂದೆ ಭಗ್ನ ಕಟ್ಟಡದ ಹೊರಗೆ ಕಾಯುತ್ತಿದ್ದರು. ಮಗಳನ್ನು ಜೀವಂತ ಕಂಡಾಗ ಅವರ ಕಣ್ಣಾಲಿಗಳು ತುಂಬಿಬಂದವು. ಕಾಣೆಯಾಗಿರುವ ಕಿಲಿಕ್ ಅವರ ಪತಿ ಮತ್ತು ಮಕ್ಕಳಿಗೆ ಶೋಧ ನಡೆಯುತ್ತಿದೆ.
ಈ ದುರತಂದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ 42,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಅವಶೇಷಗಳಡಿ ಶವಗಳು ಸಿಗುತ್ತಲೇ ಇದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದೆ. ಹತ್ತಾರು ಸಾವಿರ ಜನರು ಗಾಯಗೊಂಡಿದ್ದಾರೆ. ಸೂರು, ಮೂಲಸೌಕರ್ಯಗಳಿಲ್ಲದೆ ಲಕ್ಷಾಂತರ ಜನರು, ರಕ್ತ ಹೆಪ್ಪುಗಟ್ಟಿಸುವ ವಾತಾವರಣದಲ್ಲಿ ಬೀದಿ ಬದಿ ಜೀವಿಸುತ್ತಿದ್ದಾರೆ.
ಭೂಕಂಪವು ಟರ್ಕಿಯ 11 ಪ್ರಾಂತ್ಯಗಳಲ್ಲಿ ಭಾರಿ ಹಾನಿ ಮಾಡಿದೆ. ಅದಾನಾ, ಕಿಲಿಸ್ ಮತ್ತು ಸ್ಯಾನ್ಲಿಯುರ್ಫಾ ಪ್ರಾಂತ್ಯಗಳಲ್ಲಿ ರಕ್ಷಣಾ ಕಾರ್ಯ ಬಹುತೇಕ ಪೂರ್ಣವಾಗಿದೆ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ.
ಅವಶೇಷಗಡಿ ಸಿಲುಕಿ ಬದುಕುಳಿದವರಲ್ಲಿ ಬಹುತೇಕರನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ಹೊರತಂದಿವೆ. ಜನರ ಜೀವ ಉಳಿಸಲು ನಿರ್ಣಾಯಕವಾಗಿದ್ದ ಆರಂಭದ 76 ಗಂಟೆಗಳು ಮತ್ತು ಜನ ಬದುಕುಳಿದಿರುವ ಆಶಾಭಾವನೆಗಳು ಮುಗಿದ ನಂತರವು, ಅವಶೇಷಗಳಡಿ ಜನರು ಪವಾಡದ ರೀತಿ ಬದುಕಿರುವ ನಿದರ್ಶನಗಳು ವರದಿಯಾಗುತ್ತಲೇ ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.