ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ದಿನಗಳು ಮುಗಿದಿವೆ: ಬೈಡನ್‌

ವಾಷಿಂಗ್ಟನ್‌
Last Updated 8 ನವೆಂಬರ್ 2020, 21:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಧ್ರುವೀಕರಣದ ಕೆಟ್ಟ ದಿನಗಳು ಶೀಘ್ರವೇ ಅಂತ್ಯಗೊಳ್ಳಲಿವೆ’ ಎಂದು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜೋ ಬೈಡನ್‌ ಹೇಳಿದರು.

ದೇಶದ ಜನರನ್ನುದ್ದೇಶಿಸಿ ಶನಿವಾರ ರಾತ್ರಿ ಮಾತನಾಡಿದ ಅವರು, ‘ನಾನು ವಿಭಜನೆಯನ್ನಲ್ಲ, ದೇಶದಲ್ಲಿ ಒಗ್ಗಟ್ಟು ಮೂಡಿಸುವುದಾಗಿ ಪ್ರಮಾಣ ಮಾಡುತ್ತೇನೆ. ಕೆಂಪುರಾಜ್ಯ, ನೀಲಿ ರಾಜ್ಯ (ಕೆಂಪು ರಿಪಬ್ಲಿಕನ್‌ ಪಕ್ಷದ ಬಣ್ಣವಾದರೆ, ನೀಲಿ ಡೆಮಾಕ್ರಟಿಕ್‌ ಪಕ್ಷದ ಬಣ್ಣ) ಎಂದು ವಿಭಜನೆ ಮಾಡುವುದಿಲ್ಲ. ಬದಲಿಗೆ ‘ಅಮೆರಿಕ’ವನ್ನು ಇಡಿಯಾಗಿ ನೋಡುತ್ತೇನೆ ಎಂದರು.

‘ನನ್ನ ಮೇಲೆ ನೀವು ಇಟ್ಟಿರುವ ಭರವಸೆ ಹಾಗೂ ವಿಶ್ವಾಸದಿಂದ ನಾನು ವಿನಮ್ರನಾಗಿದ್ದೇನೆ. ನನಗೆ ಮತನೀಡಿದವರ ಪರವಾಗಿ ಹೇಗೆ ಕೆಲಸ ಮಾಡುತ್ತೇನೋ ಅಷ್ಟೇ ಪ್ರಾಮಾಣಿಕವಾಗಿ ಮತ ನೀಡದಿರುವವರ ಸೇವೆಯನ್ನೂ ಮಾಡುತ್ತೇನೆ. ಅಮೆರಿಕದ ಅತ್ಯಂತ ಕೆಟ್ಟ ದಿನಗಳನ್ನು ಈ ಕ್ಷಣದಿಂದಲೇ ಕೊನೆಗೊಳಿಸಲು ಬಯಸುತ್ತೇನೆ’ ಎಂದು ಟ್ರಂಪ್‌ ಹೆಸರು ಉಲ್ಲೇಖಿಸದೆಯೇ ಹೇಳಿದರು.

‘ಅಮೆರಿಕದ ಆತ್ಮವನ್ನು ಮರುಸ್ಥಾಪಿಸಲು, ಮಧ್ಯಮ ವರ್ಗವನ್ನು ಮತ್ತು ಈ ರಾಷ್ಟ್ರದ ಬೆನ್ನಲುಬನ್ನು ಪುನಃ ಗಟ್ಟಿಗೊಳಿಸಲು ನಾನು ಈ ಹುದ್ದೆಗೆ ಬಂದಿದ್ದೇನೆ. ಜಗತ್ತಿನಲ್ಲಿ ಅಮೆರಿಕಕ್ಕೆ ಮತ್ತೆ ಗೌರವ ಲಭಿಸುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಶ್ರಮಿಸುತ್ತೇನೆ’ ಎಂದರು.

ಟ್ರಂಪ್‌ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ, ‘ಇಂದು ನೀವು ಎಷ್ಟು ನಿರಾಶರಾಗಿದ್ದೀರಿ ಎಂಬುದನ್ನು ಊಹಿಸಬಲ್ಲೆ. ನಾನೂ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಇದು ಅಮೆರಿಕವನ್ನು ಶಮನಗೊಳಿಸಬೇಕಾದ ಸಮಯ. ಈಗ ಪರಸ್ಪ‍ರಿಗೆ ಒಂದು ಅವಕಾಶವನ್ನು ಕೊಡೋಣ. ನಾವು ಶತ್ರುಗಳಲ್ಲ, ಅಮೆರಿಕನ್ನರು’ ಎಂದರು.

ಭರವಸೆ ಆಯ್ಕೆ ಮಾಡಿದ್ದೀರಿ: ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್‌ ಮಾತನಾಡಿ, ‘ಬೈಡನ್‌ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ನೀವು ಭರವಸೆ, ಏಕತೆ, ಸಭ್ಯತೆ, ವಿಜ್ಞಾನ ಮತ್ತು ಸತ್ಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಸ್ವತಃ ಸೋಲಿನ ರುಚಿಯನ್ನು ಕಂಡಿರುವ ವ್ಯಕ್ತಿಗೆ ತನ್ನ ಗೆಲುವಿನ ಉದ್ದೇಶವೇನೆಂಬುದು ಸ್ಪಷ್ಟವಾಗಿ ತಿಳಿದಿರುತ್ತದೆ. ಅವರ ಅನುಭವವು, ಒಂದು ರಾಷ್ಟ್ರವಾಗಿ ನಮ್ಮ ಉದ್ದೇಶವನ್ನು ಈಡೇರಿಸಲು ನೆರವಿಗೆ ಬರಲಿದೆ. ನೀವು ಅಮೆರಿಕದ ಹೊಸ ಶಕೆಯನ್ನು ಆರಂಭಿಸಿದ್ದೀರಿ’ ಎಂದು ಹೇಳಿದರು.

ಕೋವಿಡ್‌ ನಿಯಂತ್ರಣ ಮೊದಲ ಕೆಲಸ

‘ಕೋವಿಡ್‌–19 ನಿಯಂತ್ರಣಕ್ಕೆ ಸ್ಪಷ್ಟ ಯೋಜನೆ ರೂಪಿಸುವುದು ಅಧ್ಯಕ್ಷನಾಗಿ ನನ್ನ ಆದ್ಯತೆಯಾಗಿರುತ್ತದೆ. ಈ ವಿಚಾರದಲ್ಲಿ ಸಲಹೆ ನೀಡಲು ಹಿರಿಯ ವಿಜ್ಞಾನಿಗಳು ಹಾಗೂ ತಜ್ಞರ ಸಮಿತಿಯೊಂದನ್ನು ಸೋಮವಾರ ನೇಮಿಸಲಾಗುವುದು. ವೈಜ್ಞಾನಿಕ ತಳಹದಿಯ ಮೇಲೆ ಈ ತಂಡ ಕೆಲಸ ಮಾಡಲಿದೆ. ಜನವರಿ 20ರಿಂದ ಅದು ಕಾರ್ಯಪ್ರವೃತ್ತವಾಗಲಿದೆ’ ಎಂದು ಬೈಡನ್ ತಿಳಿಸಿದರು.

ಅಮೆರಿಕದಲ್ಲಿ ಈವರೆಗೆ ಸುಮಾರು 2.37 ಲಕ್ಷ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ನಗರಸಭೆಯಲ್ಲಿ ಟ್ರಂಪ್‌ಗೆ ಹುದ್ದೆ!

ಜೆರುಸಲೆಮ್‌ (ಪಿಟಿಐ): ‘ಚಿಂತೆ ಮಾಡಬೇಡಿ, ನಮ್ಮ ನಗರಸಭೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ನೀವು ಅವುಗಳಿಗೆ ಅರ್ಜಿ ಸಲ್ಲಿಸಬಹುದು...’

ಶ್ವೇತಭವನದಿಂದ ನಿರ್ಗಮಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಜೆರುಸಲೆಮ್ ನಗರಸಭೆಯು ಈ ಆಹ್ವಾನ ನೀಡಿದೆ. ಪಾಲಿಕೆಯ ಫೇಸ್‌ಬುಕ್‌ ಪುಟದಲ್ಲಿ ಭಾನುವಾರ ಇಂಥ ಪೋಸ್ಟ್‌ ಒಂದು ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಅದನ್ನು ಅಳಿಸಲಾಗಿದೆ ಎಂದು ಜೆರುಸಲೆಮ್‌ ಪೋಸ್ಟ್‌ ವರದಿ ಮಾಡಿದೆ.

‘ಪಾಲಿಕೆಯ ಪುಟದಲ್ಲಿ ಪ್ರಮಾದವಶಾತ್‌ ಆ ಪೋಸ್ಟ್‌ ಅಪ್‌ಲೋಡ್‌ ಆಗಿದೆ. ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ತೆಗೆಯಲಾಗಿದೆ’ ಎಂದು ಪಾಲಿಕೆಯ ವಕ್ತಾರರು ಆ ನಂತರ ಹೇಳಿದ್ದಾರೆ.

ಟ್ರಂಪ್‌ ಅವರು ಅಮೆರಿಕದ ಏಳು ದಶಕಗಳ ನಿಲುವನ್ನು ಬದಲಿಸಿ, 2017ರಲ್ಲಿ ಇಸ್ರೇಲ್‌ನ ರಾಜಧಾನಿ ಎಂಬ ಮಾನ್ಯತೆಯನ್ನು ಜೆರುಸಲೆಮ್‌ಗೆ ನೀಡಿದ್ದರು. ಅಲ್ಲದೆ, ಟೆಲ್‌ಅವೀವ್‌ನಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಯನ್ನು ಜೆರುಸಲೆಮ್‌ಗೆ ಸ್ಥಳಾಂತರಿಸಿದ್ದರು.

‘ಬಾಂಧವ್ಯಕ್ಕೆ ಬಲ’

ನವದೆಹಲಿ (ಪಿಟಿಐ): ‘ಪ್ರಧಾನಿ ನರೇಂದ್ರ ಮೋದಿ ಮತ್ತು ಜೋ ಬೈಡನ್‌ ಅವರು ಭಾರತ–ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ರಾಮಮಾಧವ್‌ ಹೇಳಿದ್ದಾರೆ.

‘ಅಮೆರಿಕದ ಜನರು ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಅವರ ನಿರ್ಧಾರವನ್ನು ಜಗತ್ತಿನ ಇತರ ರಾಷ್ಟ್ರಗಳು ಸ್ವಾಗತಿಸಿ, ನಾಯಕತ್ವವನ್ನು ಅಭಿನಂದಿಸಬೇಕು. ಪರಸ್ಪರರ ಅಭಿವೃದ್ಧಿ ಹಾಗೂ ಜಾಗತಿಕ ಶಾಂತಿಗಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಮಧ್ಯೆ ಗಟ್ಟಿ ಬಂಧ ಬೆಸೆದುಕೊಂಡಿದೆ. ಬೈಡನ್‌, ಕಮಲಾ ನೇತೃತ್ವದಲ್ಲಿ ಈ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುವುದೆಂಬ ವಿಶ್ವಾಸವಿದೆ’ ಎಂದು ರಾಮಮಾಧವ್‌ ಹೇಳಿದ್ದಾರೆ.

‘ಉಪಾಧ್ಯಕ್ಷ ಹುದ್ದೆಗೆ ಕಮಲಾ ಅವರು ಆಯ್ಕೆಯಾಗಿರುವುದು ಅಮೆರಿಕದ ಪ್ರಜಾಪ್ರಭುತ್ವ ಎಷ್ಟೊಂದು ಜೀವಂತಿಕೆಯಿಂದ ಕೂಡಿದೆ ಎಂಬುದರ ಸಂಕೇತವಾಗಿದೆ’ ಎಂದಿರುವ ರಾಮಮಾಧವ್‌, ಕಮಲಾ ಅವರಿಗೆ ವಿಶೇಷ ಅಭಿನಂದನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT