ಶುಕ್ರವಾರ, ಮಾರ್ಚ್ 5, 2021
30 °C

‘ಇದು ಪ್ರಜಾಪ್ರಭುತ್ವದ ದಿನ’: ಏಕತೆಗೆ ಕರೆ ಕೊಟ್ಟ ಜೋ ಬೈಡನ್

ಎಎಫ್‍ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಏಕತೆಯ ಕರೆಯೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಬುಧವಾರ ಜೋ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಆಯ್ಕೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆದ ಕ್ಯಾಪಿಟಲ್ ಭವನದ ಮೇಲಿನ ದಾಳಿಯ ಎರಡು ವಾರಗಳ ಬಳಿಕ ಪ್ರಮಾಣವಚನ ಸ್ವೀಕರಿಸಿರುವ ಅವರು, ದೇಶದಲ್ಲಿ ಬೇರೂರಿರುವ ಆಳವಾದ ವಿಭಜನೆಯನ್ನು ನಿವಾರಿಸಲು ಮತ್ತು ದೇಶೀಯ ಉಗ್ರವಾದವನ್ನು ಸೋಲಿಸಲು ಪ್ರತಿಜ್ಞೆ ಮಾಡಿದರು.

ಅತ್ಯಂತ ಬಿಗಿ ಭದ್ರತೆ ನಡುವೆ ನ್ಯಾಷನಲ್ ಮಾಲ್ ಮುಂದೆ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, "ಪ್ರಜಾಪ್ರಭುತ್ವವು ಅಮೂಲ್ಯವಾದುದು, ಪ್ರಜಾಪ್ರಭುತ್ವವು ದುರ್ಬಲವಾಗಿತ್ತು. ನನ್ನ ಸ್ನೇಹಿತರೇ, ಈ ಸಮಯದಲ್ಲಿ ಪ್ರಜಾಪ್ರಭುತ್ವವು ಮೇಲುಗೈ ಸಾಧಿಸಿದೆ" ಎಂದು ಹೇಳಿದರು,

"ನೀಲಿ(ಡೆಮಾಕ್ರಟಿಕ್)ಯರ ಮೇಲೆ ಕೆಂಪು(ರಿಪಬ್ಲಿಕನ್)ವಾದಿಗಳನ್ನು ಎತ್ತಿಕಟ್ಟುವ ಈ ಅನಾಗರಿಕ ಯುದ್ಧವನ್ನು ನಾವು ಕೊನೆಗೊಳಿಸಬೇಕು. ಗ್ರಾಮೀಣ ವರ್ಸಸ್ ನಗರ, ಕನ್ಸರ್ವೇಟಿವ್ ವರ್ಸಸ್ ಲಿಬರಲ್ ಈ ಭೇದವನ್ನು ಬಿಡಬೇಕು. ನಮ್ಮ ಹೃದಯವನ್ನು ಗಟ್ಟಿಗೊಳಿಸುವ ಬದಲು ನಮ್ಮ ಆತ್ಮವನ್ನು ತೆರೆದರೆ ಇದು ಸಾಧ್ಯ. ನಾವು ಸ್ವಲ್ಪ ಸಹಿಷ್ಣುತೆ ಮತ್ತು ನಮ್ರತೆಯನ್ನು ತೋರಿಸಿದರೆ, ನಾವು ಇತರ ವ್ಯಕ್ತಿಗಳ ಜೊತೆ ನಿಲ್ಲಲು ಸಿದ್ಧರಿದ್ದರೆ ಇದನ್ನು ಮಾಡಬಹುದು. " ಎಂದು ಹೇಳಿದ್ದಾರೆ.

"ನಾವು ಒಟ್ಟಾಗಿ ಅಮೆರಿಕದ ಭರವಸೆಯ ಕಥೆಯನ್ನು ಬರೆಯುತ್ತೇವೆ, ಭಯವಲ್ಲ, ಏಕತೆ ಸಾರುತ್ತೇವೆ, ವಿಭಜನೆಯಲ್ಲ, ಬೆಳಕನ್ನ ನೋಡೋಣ, ಕತ್ತಲೆಯಲ್ಲ. ಸಭ್ಯತೆ ಮತ್ತು ಘನತೆಯ ಕಥೆ, ಪ್ರೀತಿ ಮತ್ತು ಒಳ್ಳೆಯತನ ಮೈಗೂಡಿಸಿಕೊಳ್ಳೋಣ." ಎಂದಿದ್ದಾರೆ.

ಈ ಮಧ್ಯೆ, ಎರಡನೇ ಬಾರಿಗೆ ನಾನು ಅಧ್ಯಕ್ಷಗಾದಿ ಏರುವುದನ್ನು ಮೋಸದಿಂದ ತಡೆದಿದ್ದಾರೆ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್, ಬೈಡನ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗದೆ 152 ವರ್ಷಗಳ ಸಂಪ್ರದಾಯ ಮುರಿದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರನ್ನು ಉದ್ಧೇಶಿಸಿ ಮಾತನಾಡಿದ ಅವರು, ದೇಶದ ಎಲ್ಲ ಜನರ ಧ್ವನಿಗೆ ಓಗೊಡುವುದಾಗಿ ಭರವಸೆ ನೀಡಿದ್ದಾರೆ.

"ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗಿರುತ್ತೇನೆ."

"ಅಮೆರಿಕವು ತನ್ನ ಸಮಾನತೆಯ ಆದರ್ಶದ ಜೊತೆಗೆ ನಿರಂತರ ಹೋರಾಟದ ಇತಿಹಾಸವನ್ನು ಕಂಡಿದೆ. ವರ್ಣಭೇದ ನೀತಿ, ಸ್ಥಳಿಯತೆ, ಭಯ ಮತ್ತು ರಾಕ್ಷಸೀಕರಣವು ನಮ್ಮನ್ನು ದೀರ್ಘಕಾಲ ಹರಿದು ಹಾಕಿದೆ ಎಂಬುದು ಕಠಿಣ ಕೊಳಕು ವಾಸ್ತವ’ಎಂದಿದ್ದಾರೆ.

78 ವರ್ಷದ ಬೈಡನ್ ಅಮೆರಿಕ ಅಧ್ಯಕ್ಷಗಾದಿಗೇರಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದು, ಎರಡನೇ ರೋಮನ್ ಕ್ಯಾಥೋಲಿಕ್ ಅಧ್ಯಕ್ಷರಾಗಿದ್ದಾರೆ.

ಬೈಡನ್ ಜೊತೆಗೆ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಮಲಾ ಹ್ಯಾರಿಸ್, ಭಾರತದ ತಾಯಿ ಮತ್ತು ಜಮೈಕಾದ ತಂದೆಯ ವಲಸಿಗರ ಮಗಳಾಗಿದ್ದು, ಈ ಉನ್ನತ ಹುದ್ದೆಗೇರಿದ ಮೊದಲ ಕಪ್ಪುವರ್ಣದ ಮಹಿಳೆಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು