ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌: ಕನಸು ಛಿದ್ರಗೊಳಿಸಿದ ಆತ್ಮಹತ್ಯಾ ದಾಳಿ, ಆಘಾತದಿಂದ ಹೊರಬರದ ಸಂತ್ರಸ್ತರು

Last Updated 27 ಆಗಸ್ಟ್ 2021, 7:03 IST
ಅಕ್ಷರ ಗಾತ್ರ

ಕಾಬೂಲ್‌: ತಾಲಿಬಾನ್‌ ಉಪಟಳದಿಂದ ಪಾರಾಗಿ ಅಮೆರಿಕದಲ್ಲಿ ಹೊಸ ಜೀವನ ಕಂಡುಕೊಳ್ಳಬೇಕೆಂದು ಮಿಲಾದ್‌, ಪತ್ನಿ, ಮೂವರು ಮಕ್ಕಳೊಂದಿಗೆ ದಾಖಲೆಗಳ ಚೀಲ ಹಿಡಿದು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಗುರುವಾರ ನಡೆದ ಆತ್ಮಹತ್ಯಾ ದಾಳಿಯಿಂದ ಕ್ಷಣಾರ್ಧದಲ್ಲಿಯೇ ಅವರ ಕನಸಿನ ಗೋಪುರ ನುಚ್ಚುನೂರಾಗಿಬಿಟ್ಟಿದೆ.

ವಿಮಾನ ನಿಲ್ದಾಣದಲ್ಲಿ ತರಾತುರಿಯಲ್ಲೇ ನಡೆಯುತ್ತಿರುವ ವಿದೇಶಿಯರ ಮತ್ತು ತಮ್ಮದೇ ದೇಶ ತೊರೆಯುವವರ ಸ್ಥಳಾಂತರ ಕಾರ್ಯಾಚರಣೆ ಮಧ್ಯೆಯೇ ಈ ಭೀಕರ ಸ್ಫೋಟ ನಡೆದಿದೆ. ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌ ದಾಳಿಯ ಹೊಣೆ ಹೊತ್ತಿದ್ದು, ಒಟ್ಟು 73 ಜನರು ಮೃತಪಟ್ಟಿದ್ದು ನಿರಾಶ್ರಿತರನ್ನು ದಿಗಿಲು ಬೀಳಿಸಿದೆ.

ಸೂರ್ಯ ಮುಳುಗುತ್ತಿದ್ದಂತೆ ನಡೆದ ಈ ದಾಳಿಯಲ್ಲಿ ಅಮೆರಿಕದ 13 ಸೈನಿಕರೂ ಜೀವ ಕಳೆದುಕೊಂಡಿದ್ದಾರೆ.

ವಿಮಾನ ನಿಲ್ದಾಣ ಆವರಣದ ವ್ಯಾಪ್ತಿಯಲ್ಲಿರುವ ಇಕ್ಕಟ್ಟಾದ ಜಾಗದಲ್ಲಿ ಈ ದಾಳಿ ನಡೆದ ಕಾರಣ ಜನರು ಕಂಗಾಲಾದರು. ರಕ್ತದಿಂದ ತೊಯ್ದ ದಿರಿಸುಗಳಲ್ಲಿದ್ದವರನ್ನು ವೀಲ್‌ ಚೇರ್‌ಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಠಾತ್‌ ದಾಳಿಯಿಂದ ಬೆಚ್ಚಿಬಿದ್ದವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.

ಸ್ಫೋಟದ ತೀವ್ರತೆಗೆ ಚೀರಾಟದೊಡನೆ ಜನರು ಮಾತ್ರವಲ್ಲ, ಕೆಲವರ ದೇಹದ ಅವಯವಗಳು, ಮಾಂಸದ ತುಣುಕುಗಳು ಪಕ್ಕದ ಕಾಲುವೆಯಲ್ಲಿ ಬಿದ್ದಿದ್ದವು ಎಂದು ಮಿಲಾದ್‌ ಎಎಫ್‌ಪಿಗೆ ತಿಳಿಸಿದರು.

ಪತ್ನಿ, ಮಕ್ಕಳೊಂದಿಗೆ ವಿಮಾನ ಏರಲು ಅಗತ್ಯವಾಗಿದ್ದ ದಾಖಲೆಗಳ ಚೀಲವು ಈ ಗಾಬರಿ, ಗೊಂದಲದಲ್ಲಿ ಕಳೆದುಹೋಯಿತು ಎಂದು ಮಿಲಾದ್‌ ‘ಎಎಫ್‌ಪಿ’ ಸುದ್ದಿಸಂಸ್ಥೆ ಎದುರು ಗೋಳು ತೋಡಿಕೊಂಡರು.

ಮೊದಲ ಸ್ಫೋಟದ ನಂತರ ಎಲ್ಲೆಡೆ ದಿಗಿಲು, ಭಯದ ವಾತಾವರಣ ಕಂಡುಬಂದಿತು, ಮಾತ್ರವಲ್ಲ, ನಿಲ್ದಾಣದ ಹೊರ ಆವರಣದಲ್ಲಿ ಕಾವಲು ಕಾಯುತ್ತಿದ್ದ ತಾಲಿಬಾನ್‌ ಉಗ್ರರನ್ನೇ ಅಚ್ಚರಿಯಲ್ಲಿ ಕೆಡವಿತು ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದರು.

ದ್ವಾರದ ಬಳಿ ಜಮಾಯಿಸಿದ್ದ ಜನರನ್ನು ಚದುರಿಸಲು ತಾಲಿಬಾನಿಗಳೂ ಗಾಳಿಯಲ್ಲಿ ಗುಂಡುಹಾರಿಸಿದರು. ದೇಶ ತೊರೆಯುವ ಕ್ಷೀಣ ಆಸೆಯಿಂದ ಅವರು ವಿಮಾನ ನಿಲ್ದಾಣಕ್ಕೆ ನುಗ್ಗುವ ಧಾವಂತದಲ್ಲಿದ್ದರು. ತನ್ನ ಗಾಯಾಳು ಶಿಶುವಿನೊಂದಿಗೆ ವ್ಯಕ್ತಿಯೊಬ್ಬ ಧಾವಿಸುತ್ತಿದ್ದನ್ನು ಕಂಡೆ ಎಂದು ಅವರು ಹೇಳಿದರು.

ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳು ಒಂದು ದಿನ ಮೊದಲಷ್ಟೇ ದಾಳಿಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದವು. ಅಮೆರಿಕ ಅಧ್ಯಕ್ಷ ಜೊ ಬಿಡೆನ್‌ ಕೂಡ ಈ ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಿರಲಿಲ್ಲ. ಆದರೆ ವಿಮಾನಗಳ ಮೂಲಕ ಕಾರ್ಯಾಚರಣೆ ಮುಗಿಸಲು ಐದು ದಿನಗಳ ಗಡುವು ಉಳಿದಿದ್ದ ಕಾರಣ ಜನರು ಇನ್ನೂ ವಿಮಾನ ನಿಲ್ದಾಣದ ಸುತ್ತ ಸೇರಿದ್ದರು. ತಾಲಿಬಾನ್‌ ಆಡಳಿತಕ್ಕೆ ಬೆದರಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ, ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಯಲ್ಲಿ ದೇಶ ತೊರೆದಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ನೂರಾರು ಮಂದಿಯಲ್ಲಿ ಹಲವರು ಆಘಾತದಿಂದ ಹೊರಬಂದಿಲ್ಲ. ಭಯದಿಂದ ಮಾತಾಡಲೂ ಶಕ್ತರಾಗಿಲ್ಲ. ಕಾಬೂಲ್‌ನ ತುರ್ತು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT