ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಉಡುಗೊರೆಯೂ ಸೇರಿ 2.5 ಲಕ್ಷ ಡಾಲರ್ ‘ಗಿಫ್ಟ್‘ ಬಹಿರಂಗಪಡಿಸದ ಟ್ರಂಪ್: ವರದಿ

Last Updated 21 ಮಾರ್ಚ್ 2023, 11:36 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಪಡೆದ ಒಟ್ಟು 2.5 ಲಕ್ಷ ಡಾಲರ್ (₹ 2.06 ಕೋಟಿ) ಮೌಲ್ಯದ ಉಡುಗೊರೆಗಳ ವಿವರಗಳನ್ನು ಬಹಿರಂಗ ಪಡಿಸಲು ವಿಫಲರಾಗಿದ್ದಾರೆ ಎಂದು ಇಲ್ಲಿನ ಆಡಳಿತ ಪಕ್ಷವಾದ ಡೆಮಾಕ್ರಾಟಿಕ್ ತನ್ನ ವರದಿಯಲ್ಲಿ ಆರೋಪಿಸಿದೆ.

ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೊಟ್ಟ ಒಟ್ಟು 47 ಸಾವಿರ ಡಾಲರ್ ( ₹ 38.05 ಲಕ್ಷ) ಮೌಲ್ಯದ ಉಡುಗೊರೆಗಳೂ ಸೇರಿವೆ ಎಂದು ವರದಿಯಲ್ಲಿ ದೂರಿದೆ.

ಡೆಮಾಕ್ರಾಟಿಕ್ ಪಕ್ಷದ ಸಮಿತಿಯು ಪ್ರಾಥಮಿಕ ಸಂಶೋಧನೆಯ ಮೂಲಕ ವರದಿ ಬಿಡುಗಡೆಗೊಳಿಸಿದ್ದು, ‘ಸೌದಿಯ ಖಡ್ಗಗಳು, ಭಾರತದ ಆಭರಣಗಳು, ಹಾಗೂ ಸಾಲ್ವಡೋರ್‌ನಲ್ಲಿ ರಚಿಸಿದ ಟ್ರಂಪ್‌ರ ಬೃಹತ್ ಭಾವಚಿತ್ರ ಮುಂತಾದ ಲಕ್ಷುರಿ ಉಡುಗೊರೆಗಳ ವಿವರಗಳನ್ನು ತಿಳಿಸಲು ಟ್ರಂಪ್ ಸರ್ಕಾರ ಹಿಂದೇಟು ಹಾಕಿದೆ ಎಂಬ ತಲೆಬರಹದಡಿ ವರದಿ ಪ್ರಕಟಿಸಿದೆ.

ವಿದೇಶದ ಅಧಿಕಾರಿಗಳಿಂದ ಪಡೆದ ಉಡುಗೊರೆಗಳ ವಿವರಗಳನ್ನು ಮುಚ್ಚಿಟ್ಟಿರುವುದು ಇಲ್ಲಿನ ‘ಸರ್ಕಾರಿ ಗಿಫ್ಟ್ ಸಂಬಂಧಿತ ಕಾನೂನಿಗೆ‘ ವಿರುದ್ಧವಾಗಿದೆ ಎಂದು ತಿಳಿಸಿದೆ.

ವರದಿ ಪ್ರಕಾರ ಟ್ರಂಪ್ ಅವರಿಗೆ ಕೊಟ್ಟ ಉಡುಗೊರೆಗಳಲ್ಲಿ ಭಾರತದಿಂದ ಯೋಗಿ ಆದಿತ್ಯನಾಥ್ ಅವರ 8,500 ಡಾಲರ್ (₹ 7.02 ಲಕ್ಷ) ಮೌಲ್ಯದ ಹೂದಾನಿ ಹಾಗೂ 4,600 ಡಾಲರ್ (₹ 3.8 ಲಕ್ಷ) ಮೌಲ್ಯದ ತಾಜ್‌ಮಹಲ್ ಕಲಾಕೃತಿ, ರಾಮನಾಥ್ ಕೋವಿಂದ್‌ ಅವರ 6,600 ಡಾಲರ್ (₹ 5.04 ಲಕ್ಷ) ದರದ ನೆಲಹಾಸು, ಜತಗೆ ಮೋದಿ ಅವರ 1,900 ಡಾಲರ್ (₹ 1.5 ಲಕ್ಷ) ಬೆಲೆಯ ಕಫ್‌ಲಿಂಕ್ (ಬ್ಯಾಡ್ಜ್‌ ರೀತಿಯ ಬಟನ್) ಕೂಡ ಸೇರಿವೆ.

ಅಮೆರಿಕದ 45ನೇ ಅಧ್ಯಕ್ಷರಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 2017ರಿಂದ 2021ವರೆಗೆ ಆಡಳಿತ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT